ಬೆಂಗಳೂರು, ಜೂ.11- ಕಳೆದ ಎರಡು ತಿಂಗಳಿಂದೀಚೆಗೆ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜತೆಗೆ ಮಳೆಯ ಅನಾಹುತಗಳಿಂದ 104 ಮಂದಿಯ ಜೀವ ಹಾನಿಯಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಅನಾಹುತಗಳಿಂದ ಉಂಟಾದ ಜೀವ ಹಾಗೂ ಆಸ್ತಿಪಾಸ್ತಿ ಹಾನಿಗೆ ತಕ್ಷಣ ಪರಿಹಾರ ವಿತರಿಸಲು ಸೂಚಿಸಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 186 ಕೋಟಿ ಅನುದಾನ ಲಭ್ಯವಿದೆ. ಜತೆಗೆ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಯಲ್ಲಿ 320 ಕೋಟಿ ಹಣವಿದ್ದು, ಇದನ್ನು ಬಳಸಿಕೊಂಡು ಪರಿಹಾರ ಕಾರ್ಯಗಳನ್ನು ಕೈಗಿತ್ತಿಕೊಳ್ಳಲಾಗುವುದು. ಬೆಳೆ ನಷ್ಟದ ಸಮೀಕ್ಷೆ ನಡೆಯುತ್ತಿದೆ. ಅದರ ವರದಿ ಬಂದ ನಂತರ ಕೇಂದ್ರದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಮಾರ್ಚ್ 1ರಿಂದ ಮೇ 31ರವರೆಗೆ ಪೂರ್ವ ಮುಂಗಾರು ಹಂಗಾಮಿನಲ್ಲಿ 125 ಮಿ.ಮೀ. ಬದಲಾಗಿ 193ಮಿ.ಮೀ. ಮಳೆಯಾಗಿ ವಾಡಿಕೆಗಿಂತ ಶೇ.50ರಷ್ಟು ಹೆಚ್ಚುವರಿ ಮಳೆಯಾಗಿದೆ.
ಮೂರು ದಿನ ಮುಂಚಿತವಾಗಿಯೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು, ಜೂ.1ರಿಂದ 10ರವರೆಗೆ 51 ಮಿ.ಮೀ. ಬದಲಾಗಿ 89 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.73ರಷ್ಟು ಹೆಚ್ಚು ಮಳೆ ಸುರಿದಿದೆ.
ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು, ಕರಾವಳಿ ಒಳಗೊಂಡಂತೆ ಎಲ್ಲಾ ಪ್ರದೇಶದಲ್ಲೂ ಸಮೃದ್ಧ ಮಳೆಯಾಗಿದೆ. 29 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೆ, ಬೆಂಗಳೂರು ಜಿಲ್ಲೆಯಲ್ಲಿ ವಾಡಿಕೆಯಷ್ಟು ಸರಾಸರಿ ಮಳೆಯಾಗಿದೆ. ಉತ್ತಮ ಮಳೆಯಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ ಎಂದು ಹೇಳಿದರು.
ಜೋರಾದ ಸಿಡಿಲಿನ ಅಬ್ಬರ:
ಏ.1ರಿಂದ ಜೂ.10ರವರೆಗೆ ಮಳೆಯಿಂದ 104 ಮಂದಿಯ ಜೀವ ಹಾನಿಯಾಗಿದೆ. ಅದರಲ್ಲಿ 94 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. 10 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಜೀವ ಹಾನಿಗೆ 4 ಲಕ್ಷ ರೂ. ಪರಿಹಾರದಂತೆ ಒಟ್ಟು 4.16ಕೋಟಿ ಪರಿಹಾರ ವಿತರಿಸಲಾಗುತ್ತಿದೆ. 24 ಗಂಟೆ ಒಳಗಾಗಿ ವಾರಸುದಾರರಿಗೆ ಪರಿಹಾರ ತಲುಪಿಸುವಂತೆ ಸೂಚಿಸಲಾಗಿದೆ ಎಂದರು.
232 ಜಾನುವಾರುಗಳ ಜೀವ ಹಾನಿಯಾಗಿದ್ದು, ಪ್ರತಿ ಜಾನುವಾರಿಗೆ 20ಸಾವಿರದಂತೆ 1.60 ಕೋಟಿ ಪರಿಹಾರ ನೀಡಲಾಗುವುದು. 2101 ಮನೆಗಳು ಭಾಗಶಃ, 189 ಸಂಪೂರ್ಣ ಹಾನಿ ಸೇರಿದಂತೆ 2598 ಮನೆಗಳು ಮಳೆಯಿಂದ ಹಾನಿಗೊಳಗಾಗಿವೆ.
ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 95,100ರೂ. ಭಾಗಶಃ ಹಾನಿಗೊಳಗಾದ ಮನೆಗಳಿಗೆ 5,200ರೂ.ನಂತೆ ಪರಿಹಾರ ವಿತರಿಸಲಾಗುತ್ತಿದೆ. ರಾಜ್ಯ ತುರ್ತು ನಿರ್ವಹಣಾ ಕೇಂದ್ರ ಮತ್ತು ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರ ದಿನದ 24 ಗಂಟೆ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಕುಡಿಯುವ ನೀರಿನ ಪರಿಸ್ಥಿತಿ ಸುಧಾರಣೆ:
ರಾಜ್ಯದಲ್ಲಿ ಕಳೆದ ವರ್ಷ ಮಳೆಯ ಕೊರತೆಯಿಂದ 1200 ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವವಿತ್ತು. ಟ್ಯಾಂಕರ್‍ಗು ಹಾಗೂ ಖಾಸಗಿ ಬೋರ್‍ವೆಲ್‍ಗಳನ್ನು ಬಳಸುವ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು, ಕೇವಲ 248ಹಳ್ಳಿಗಳಲ್ಲಿ ಮಾತ್ರ ನೀರಿನ ಅಭಾವ ಇದೆ. 401 ಟ್ಯಾಂಕರ್‍ಗಳನ್ನು ಬಳಸಿಕೊಂಡು ನೀರು ಸರಬರಾಜು ಮಾಡಲಾಗುತ್ತಿದೆ. 197 ಖಾಸಗಿ ಬೋರ್‍ವೆಲ್‍ಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಜಿಲ್ಲಾ ಪಂಚಾಯ್ತಿ ಸಿಇಒಗಳ ಖಾತೆಯಲ್ಲಿ ಒಂದು ಕೋಟಿ ಅನುದಾನವಿದ್ದು, ಅದನ್ನು ಬಳಸಿಕೊಂಡು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಬಗರ್‍ಹುಕುಂ ಸಾಗುವಳಿ ಹಿಡುವಳಿದಾರರಿಗೆ ಖಾತೆ ಮಾಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನಿನ ಪ್ರಕಾರ ಎಷ್ಟು ಸಾಧ್ಯವೋ ಅಷ್ಟು ಕ್ರಮ ಕೈಗೊಳ್ಳಲಾಗುವುದು. ಸರ್ವೆಯರ್‍ಗಳ ಕೊರತೆಯನ್ನು ನೀಗಿಸಲು 1067 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. 4ಸಾವಿರ ಮಂಜೂರಾದ ಹುದ್ದೆಗಳಿಗೆ ಸುಮಾರು 165 ಹುದ್ದೆಗಳು ಹೊರತು ಪಡಿಸಿ ಉಳಿದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ದೇಶಪಾಂಡೆ ಹೇಳಿದರು.
ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಾದ ರಮಣರೆಡ್ಡಿ, ಗಂಗಾರಾಮ್ ಬಡೇರಿಯಾ ಸೇರಿದಂತೆ ಮತ್ತಿತರರಿದ್ದರು.