ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಕುಟುಂಬದ ಸದಸ್ಯರ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುನಿಸು

 

ಬೆಂಗಳೂರು, ಜೂ.11-ಒಂದೆಡೆ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನ ಸಿಗದೆ ಶಾಸಕರು ಬಂಡಾಯ ಸಾರಿರುವ ಬೆನ್ನಲ್ಲೇ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಕುಟುಂಬದ ಸದಸ್ಯರ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುನಿಸಿಕೊಂಡಿದ್ದಾರೆ.
ನನ್ನ ಆಡಳಿತ ವಿಷಯದಲ್ಲಿ ಯಾವುದೇ ಕಾರಣಕ್ಕೂ ಕುಟುಂಬದ ಸದಸ್ಯರು, ಅಣ್ಣತಮ್ಮಂದಿರು, ರಕ್ತಸಂಬಂಧಿಗಳು ಸೇರಿದಂತೆ ಯಾರೊಬ್ಬರೂ ಮಧ್ಯ ಪ್ರವೇಶ ಮಾಡಬಾರದೆಂದು ಕಡ್ಡಿಮುರಿದಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಕುಮಾರಸ್ವಾಮಿ ಅವರ ಈ ಮಾತಿಗೆ ಪುಷ್ಠಿ ನೀಡುವಂತೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಸರ್ಕಾರ ರಚನೆಯಾದ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಅಲ್ಲದೆ, ಸರ್ಕಾರದ ಬಗ್ಗೆ ಒಂದೇ ಒಂದು ಮಾತನಾಡದೆ ಮೌನವಹಿಸಿರುವುದು ಸಾಕಷ್ಟು ಊಹಾಪೆÇೀಹಗಳಿಗೆ ಕಾರಣವಾಗಿದೆ.
ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದ ವಿಧಾನಪರಿಷತ್ ಸದಸ್ಯ ಸಯ್ಯದ್ ಆಗಾ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದನ್ನು ಬಿಟ್ಟರೆ ದೇವೇಗೌಡರು ಸಾರ್ವಜನಿಕವಾಗಿ ದೂರ ಉಳಿದಿದ್ದು, ಮೌನಕ್ಕೆ ಶರಣಾಗಿದ್ದಾರೆ.

ಮೂಗು ತೂರಿಸುವ ಅಗತ್ಯವಿಲ್ಲ:
ನಾನು ಅನಿವಾರ್ಯ ಪರಿಸ್ಥಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದೇನೆ. ನನ್ನ ಅವಧಿಯಲ್ಲಿ ಯಾರೊಬ್ಬರೂ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುವುದು, ಇಲ್ಲವೇ ಅನಗತ್ಯವಾಗಿ ಮಧ್ಯ ಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ತಮ್ಮ ತಂದೆ ಎಚ್.ಡಿ.ದೇವೇಗೌಡರು ಹಾಗೂ ಸಹೋದರ ಎಚ್.ಡಿ.ರೇವಣ್ಣನಿಗೆ ನೇರ ಮಾತುಗಳಲ್ಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸಿದ ಬಳಿಕ ದೇವೇಗೌಡರ ನಿವಾಸ ಪದ್ಮನಾಭನಗರದಲ್ಲಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಲಕ್ಷ್ಮೀನಾರಾಯಣ, ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು, ನಗರ ಪೆÇಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ಸೇರಿದಂತೆ ಮತ್ತಿತರ ಜತೆ ಸಭೆ ನಡೆಸಿದ್ದರು.

ಇದರ ಜತೆಗೆ ಇತ್ತೀಚೆಗೆ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ಕೆಲ ಅಧಿಕಾರಿಗಳ ಸಭೆ ನಡೆಸಿದ್ದರು. ಈ ವೇಳೆ ಎಚ್.ಡಿ.ರೇವಣ್ಣ ತಮಗೆ ಸಂಬಂಧಪಡದ ಕೆಎಂಎಫ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದರು.
ಅಲ್ಲದೆ, ಪತ್ರಿಕಾಗೋಷ್ಠಿ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ್ದಕ್ಕೆ ಖುದ್ದು ಕುಮಾರಸ್ವಾಮಿ ಅವರೇ ಆಕ್ಷೇಪಿಸಿದ್ದರು. ಹೀಗೆ ಆಡಳಿತದ ಪ್ರತಿ ಹಂತದಲ್ಲೂ ಕುಟುಂಬದವರ ಹಸ್ತಕ್ಷೇಪದಿಂದ ಬೇಸತ್ತಿರುವ ಮುಖ್ಯಮಂತ್ರಿಗಳು ನಾನು ಅಧಿಕಾರದಲ್ಲಿ ಮುಂದುವರೆಯಬೇಕಾದರೆ ನೀವು ಮೌನವಾಗಿರಬೇಕೆಂದು ಮನವಿ ಮಾಡಿಕೊಂಡಿದ್ದರು.
ಮೊದಲೇ ನಮ್ಮದು ಕುಟುಂಬ ರಾಜಕಾರಣ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ದೇವೇಗೌಡರ ಹಸ್ತಕ್ಷೇಪವೇ ಕಾರಣ ಎಂದು ಕೇಳಿ ಬರುತ್ತಿದೆ. ಅನಗತ್ಯವಾಗಿ ಅಪಪ್ರಚಾರ ಹೊತ್ತಿಕೊಳ್ಳುವ ಬದಲು ಸುಮ್ಮನಿರುವುದೇ ಉತ್ತಮ ಎಂದು ಕುಟುಂಬದ ಸದಸ್ಯರಿಗೆ ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ಎಚ್.ಡಿ.ರೇವಣ್ಣ ವಿರುದ್ಧವೂ ಅಸಮಾಧಾನ:
ಇನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನಡವಳಿಕೆ ವಿರುದ್ಧವೂ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಸರ್ಕಾರ ರಚನೆಯಾದ ಮೇಲೆ ತನಗೆ ಲೋಕೋಪಯೋಗಿ ಖಾತೆ ಜತೆಗೆ ಇಂಧನ ಖಾತೆಯನ್ನು ನೀಡುವಂತೆ ಪಟ್ಟು ಹಿಡಿದಿದ್ದು, ಅಲ್ಲದೆ, ಕೆಲವು ಸಚಿವರಿಗೆ ಇಂತಿಂತಹ ಖಾತೆಗಳನ್ನು ನೀಡುವಂತೆ ಹೇಳಿದ್ದು, ಅಧಿಕಾರಿಗಳ ವರ್ಗಾವಣೆ, ಕೆಲವು ಇಲಾಖೆಗಳ ಕಡ ಪರಿಶೀಲನೆ ಸೇರಿದಂತೆ ಸರ್ಕಾರದ ಪ್ರಮುಖ ನೀತಿ, ನಿರೂಪಣೆಯಲ್ಲಿ ಕೈ ಹಾಡಿಸುತ್ತಿರುವುದಕ್ಕೆ ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿಯಿಂದ ಅಪಪ್ರಚಾರ:
ಇನ್ನು ಪ್ರತಿಪಕ್ಷ ಬಿಜೆಪಿ, ಸಮ್ಮಿಶ್ರ ಸರ್ಕಾರದ ವಿರುದ್ಧ ಈಗಾಗಲೇ ಅಪಪ್ರಚಾರ ನಡೆಸುತ್ತಿದೆ. ಪದ್ಮನಾಭನಗರದಿಂದಲೇ ಎಲ್ಲವೂ ನಿಯಂತ್ರಣವಾಗುತ್ತಿದೆ ಎಂದು ಆ ಪಕ್ಷದ ನಾಯಕರು ಹೋದ ಕಡೆಯಲೆಲ್ಲಾ ಟೀಕೆ ಮಾಡುತ್ತಿದ್ದಾರೆ.
ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನು ಕೆಲವು ತಿಂಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಪ್ಪ-ಮಕ್ಕಳು ವಿಳಾಸವೇ ಸಿಗದಂತೆ ಮಾಡುತ್ತಾರೆ ಎಂದು ಹೇಳಿದ್ದರು. ಹಿಂದೆ ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೂ ಇಂತಹದ್ದೇ ಟೀಕೆ ಎದುರಾಗಿತ್ತು.

ಸರ್ಕಾರ ಎಷ್ಟು ದಿನ ಇರುತ್ತದೆ ಎಂಬುದಕ್ಕಿಂತ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ನಾನು ರಾಜ್ಯದ ಜನರಿಗೆ ನ್ಯಾಯ ಒದಗಿಸಬೇಕು. ಸಮ್ಮಿಶ್ರ ಸರ್ಕಾರ ನಡೆಸುವುದು ಎಂದರೆ ತಂತಿಯ ಮೇಲೆ ನಡೆದಂತೆ. ಸಣ್ಣಪುಟ್ಟ ಕಾರಣಗಳಿಂದಲೇ ಸರ್ಕಾರ ಬಿದ್ದು ಹೋಗುವ ಅಪಾಯವಿರುತ್ತದೆ.
ಹೀಗಾಗಿ ಸರ್ಕಾರದ ಯಾವುದೇ ತೀರ್ಮಾನದಲ್ಲೂ ನಮ್ಮ ಕುಟುಂಬದ ಸದಸ್ಯರು ಮಧ್ಯ ಪ್ರವೇಶ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸುಮ್ಮನಿರುವರೇ ಗೌಡರು…?:
85ರ ಇಳಿ ವಯಸ್ಸಿನಲ್ಲೂ ಎಚ್.ಡಿ.ದೇವೇಗೌಡರು ಯುವಕರು ನಾಚುವಂತೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಿದ್ದರು. ಕುಮಾರಸ್ವಾಮಿ ಅವರಿಗಿಂತಲೂ ಹೆಚ್ಚಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜೆಡಿಎಸ್ 38 ಸ್ಥಾನ ಗೆಲ್ಲಲು ಕಾರಣೀಭೂತರಾದವರು.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಗಿದೆ. ಅದಾದ ಮಾತ್ರಕ್ಕೆ ಯಾವುದೇ ಪ್ರಮುಖ ತೀರ್ಮಾನಗಳಲ್ಲಿ ಮಧ್ಯ ಪ್ರವೇಶ ಮಾಡಬಾರದೆಂದು ಕುಮಾರಸ್ವಾಮಿ ಹೇಳಿದ ತಕ್ಷಣ ದೇವೇಗೌಡರು ಮೌನಕ್ಕೆ ಶರಣಾಗುವರೇ ಎಂಬುದೇ ಯಕ್ಷಪ್ರಶ್ನೆ.
ಆದರೆ, ಗೌಡರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಅವರಿಗೆ ಸರ್ಕಾರ ಉಳಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪಕ್ಷ ಮುಖ್ಯವಾಗುತ್ತದೆ. ಹೀಗಾಗಿ ಅಷ್ಟು ಸುಲಭವಾಗಿ ಅವರು ಸುಮ್ಮನಿರುವುದಿಲ್ಲ ಎಂದು ಆಪ್ತರು ಹೇಳುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ