ಬೆಂಗಳೂರು, ಜೂ.11-ರಾಜ್ಯದ ಮುಂಗಾರು, ಬೆಳೆ ಹಾನಿ ಸೇರಿದಂತೆ ರಾಜ್ಯದ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಜೂ.13 ರಂದು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.
ಅಂದು ವಿಧಾನಸೌಧದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪ್ರಧಾನಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಲಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಸಭೆ ಕರೆಯಲಾಗಿದ್ದು, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ಹಾನಿ, ಕೈಗೊಂಡ ಪರಿಹಾರ ಕಾರ್ಯಗಳು, ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಸೇರಿದಂತೆ ರಾಜ್ಯದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಂಗಾರು ಮಳೆ ರಾಜ್ಯದೆಲ್ಲೆಡೆ ಉತ್ತಮವಾಗಿ ಬೀಳುತ್ತಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕೆಲವೆಡೆ ಅತಿ ಹೆಚ್ಚು ಮಳೆಯಾಗಿ ಅತಿವೃಷ್ಟಿಯೂ ಉಂಟಾಗಿದೆ. ಮೇ ಮತ್ತು ಜೂನ್‍ನಲ್ಲಿ ಬಿದ್ದ ಭಾರೀ ಮಳೆಗೆ ಬೆಳೆ ನಷ್ಟ, ವಿದ್ಯುತ್ ಕಂಬ, ಆಸ್ತಿಪಾಸ್ತಿ ನಷ್ಟ ಮತ್ತಿತರ ವಿಷಯಗಳ ಬಗ್ಗೆ ಮುಖ್ಯಮಂತ್ರಿಯವರು ಸಭೆ ನಡೆಸಿ ಸಲಹೆ ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.