ಅಧಿಕೃತವಾಗಿ ಚಾಲನೆ ಪಡೆದುಕೊಂದ ಸರ್ಕಾರದ ಚಟುವಟಿಕೆಗಳು

 

ಬೆಂಗಳೂರು, ಜೂ.11-ನೂತನ ಸರ್ಕಾರದ ಸಚಿವ ಸಂಪುಟ ವಿಸ್ತಚರಣೆ ಮತ್ತು ಖಾತೆ ಹಂಚಿಕೆಯಾದ ನಾಲ್ಕು ದಿನಗಳ ನಂತರ ಸಚಿವರು ಕಾರ್ಯಾರಂಭ ಮಾಡಿದ್ದು, ಸರ್ಕಾರದ ಚಟುವಟಿಕೆಗಳು ಅಧಿಕೃತ ಚಾಲನೆ ಪಡೆದುಕೊಂಡಿವೆ.
ವಿಧಾನಸಭೆ ಚುನಾವಣೆ ನಂತರ ರಚನೆಯಾದ ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆ, ಸಂಪುಟ ವಿಸ್ತರಣೆಯೇ ದೊಡ್ಡ ಸವಾಲಾಗಿದ್ದು, ಬಹಳಷ್ಟು ದಿನ ಅದಕ್ಕಾಗಿಯೇ ಕಾಲಹರಣವಾಯಿತು.
ಅಂತಿಮವಾಗಿ ಜೂ.6 ರಂದು 25 ಮಂದಿ ಸಚಿವರು ಸಂಪುಟಕ್ಕೆ ಸೇರ್ಪಡೆಯಾದರು. ಶುಕ್ರವಾರ ಖಾತೆ ಹಂಚಿಕೆಯಾಗಿತ್ತು. ಆನಂತರ ಶನಿವಾರ-ಭಾನುವಾರ ಸರ್ಕಾರಿ ರಜೆ ಇದ್ದುದರಿಂದ ಬಹಳಷ್ಟು ಸಚಿವರ ಕಾರ್ಯಾರಂಭ ಮಾಡಿರಲಿಲ್ಲ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತ್ರ ಅಧಿಕಾರಿಗಳ ಸಭೆ ನಡೆಸಿದ್ದರು.

ಇಂದು ಸುಮಾರು ಐದಾರು ಮಂದಿ ಸಚಿವರು ವಿಧಾನಸೌಧಕ್ಕೆ ಆಗಮಿಸಿ ಇಲಾಖೆಯ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಲಾರಂಭಿಸಿದ್ದಾರೆ. ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ , ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಸೇರಿದಂತೆ ಹಲವಾರು ಸಚಿವರು ಇಂದು ವಿಧಾನಸೌಧಕ್ಕೆ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದರು.

ಡಿ.ಕೆ.ಶಿವಕುಮಾರ್ ಅವರು ಬೆಳಗ್ಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಇಲಾಖೆ ಕಾರ್ಯದರ್ಶಿಗಳು, ಪ್ರಧಾನಕಾರ್ಯದರ್ಶಿಗಳು, ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಭಾಗವಹಿಸಿದ್ದರು. ಮಾಜಿ ಪ್ರಧಾನಿ ದೇವೇಗೌಡರ ಅಳಿಯಂದಿರಾದ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾದ ಮಂಜುನಾಥ್, ಸಂಜಯ್‍ಗಾಂಧಿ ಆಸ್ಪತ್ರೆಯ ನಿರ್ದೇಶಕರಾದ ಚಂದ್ರಶೇಖರ್ ಸಭೆಯಲ್ಲಿ ಭಾಗವಹಿಸಿದ್ದು ವಿಶೇಷ.

ಮೊದಲ ದಿನ ಇಲಾಖೆಯ ಸಮಗ್ರ ಪರಿಚಯ ಮತ್ತು ಸಚಿವರು ತಮ್ಮ ನಿಲುವುಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾದ ರೀತಿ ರಿವಾಜುಗಳ ಬಗ್ಗೆ ಸೂಚನೆ ನೀಡಲಾಯಿತು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರಂಭದಿಂದಲೂ ನಿರಂತರವಾಗಿ ಸಭೆಗಳ ನಂತರ ಸಭೆಗಳನ್ನು ಮಾಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದ ಸಚಿವರು ಇಂದಿನಿಂದ ಕಾರ್ಯಾರಂಭಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಟೇಕಾಫ್ ಆಗಿಲ್ಲ ಎಂಬ ಆರೋಪಕ್ಕೆ ಉತ್ತರ ನೀಡುವ ಸಲುವಾಗಿ ಕ್ಷಿಪ್ರ ಕಾರ್ಯಾಚರಣೆ ಮೂಲಕ ತಿರುಗೇಟು ನೀಡಲು ಬಹಳಷ್ಟು ಸಚಿವರು ನಿರ್ಧರಿಸಿದ್ದು, ನಮ್ಮ ವೇಗಕ್ಕೆ ತಕ್ಕಂತೆ ಕೆಲಸ ಮಾಡಬೇಕು, ಕಾಲಹರಣ ಮಾಡುವುದನ್ನು ಸಹಿಸುವುದಿಲ್ಲ ಎಂದು ನೂತನ ಸಚಿವರುಗಳು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಖಾತೆ ಹಂಚಿಕೆಯಲ್ಲಿ ಪಕ್ಷದ ವರಿಷ್ಠರು ಹೊರಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.
ಸಚಿವರಾಗಿ ಇಂದಿನಿಂದ ಕಾರ್ಯಾರಂಭ ಮಾಡಿದ ಅವರು, ಖಾತೆ ಹಂಚಿಕೆಯಲ್ಲಿ ಅಸಮಾಧಾನ ಇದೆ ಎಂಬ ಆರೋಪ ಸುಳ್ಳು. ಜೆಡಿಎಸ್ ಒಂದು ಕುಟುಂಬವಿದ್ದಂತೆ. ವರಿಷ್ಠರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಜವಾಬ್ದ್ದಾರಿ ಹಂಚಿದ್ದಾರೆ. ನನಗೆ ಸಾರಿಗೆ ಕೊಟ್ಟಿದ್ದು, ನನಗೆ ಯಾವುದೇ ಅಸಮಾಧಾನವಿಲ್ಲ. ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡುತ್ತೇವೆ ಎಂದ ಅವರು, ಸಾರಿಗೆ ಇಲಾಖೆ ಎಂದರೆ ಕಮೀಷನ್ ದಂಧೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಜನಪರವಾಗಿ ಯಾವೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ. ಇಲಾಖೆಯನ್ನು ಜನಸ್ನೇಹಿಯಾಗಿ ಮಾಡುವುದು, ಆರೋಪ ಮುಕ್ತವಾಗಿಸುವುದು ನನ್ನ ಗುರಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ