ಬೆಂಗಳೂರು, ಜೂ.11- ಸಚಿವ ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್‍ನಲ್ಲಿ ಉಂಟಾದ ಭಿನ್ನಮತ ಕೊಂಚ ಶಮನವಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಹಗ್ಗ-ಜಗ್ಗಾಟ ಶುರುವಾಗಿದೆ.
ಪ್ರಸ್ತುತ ಕೆಪಿಸಿಸಿಯ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಹಾಗೂ ಗೃಹ ಮತ್ತು ನಗರಾಭಿವೃದ್ಧಿ ಸಚಿವರಾಗಿರುವುದರಿಂದ ತೆರವಾಗಲಿರುವ ಕೆಪಿಸಿಸಿ ಹುದ್ದೆಯನ್ನು ಭರ್ತಿ ಮಾಡಲು ಹೈಕಮಾಂಡ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಆ ಹುದ್ದೆ ಪಡೆಯಲು ಕಾಂಗ್ರೆಸ್‍ನಲ್ಲಿ ತೀವ್ರ ಪೈಪೆÇೀಟಿ ಶುರುವಾಗಿದೆ.
ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ದಿನೇಶ್‍ಗುಂಡೂರಾವ್ ಹಾಗೂ ಕೃಷ್ಣಬೈರೇಗೌಡರ ಹೆಸರು ಅಧ್ಯಕ್ಷ ಹುದ್ದೆಗೆ ಪ್ರಬಲವಾಗಿ ಕೇಳಿ ಬಂದಿದೆ. ಆದರೆ ಕೃಷ್ಣಬೈರೇಗೌಡ ಅವರು ಸರ್ಕಾರದ ಭಾಗವಾಗಿರುವುದರಿಂದ ಅವರಿಗೆ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ದಿನೇಶ್‍ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಯುವ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಆರ್.ವಿ.ದೇಶಪಾಂಡೆ ಅವರನ್ನು ಸಚಿವರನ್ನಾಗಿ ಮಾಡಲಾಗಿದ್ದು ರಮೇಶ್‍ಕುಮಾರ್ ಅವರಿಗೆ ಸ್ವೀಕರ್ ಹುದ್ದೆ ನೀಡಲಾಗಿದೆ. ಇಬ್ಬರು ಬ್ರಾಹ್ಮಣರಿಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದ್ದು ಅದೇ ಸಮುದಾಯದ ದಿನೇಶ್‍ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವುದಕ್ಕೇ ಆಕ್ಷೇಪ ವ್ಯಕ್ತವಾಗಿದೆ.
ಆದರೆ ಭಿನ್ನಮತ ಶಮನಗೊಳಿಸುವ ನೆಪದಲ್ಲಿ ನಿನ್ನೆ ಕಾಂಗ್ರೆಸ್ ಸಂಸದರು, ರಾಜ್ಯಸಭಾ ಸದಸ್ಯರು ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಸೇರಿದ್ದ ಸಂದರ್ಭದಲ್ಲಿ, ಕೆಪಿಸಿಸಿ ಅಧ್ಯಕ್ಷ ಹುದ್ದೆ ನೇಮಕ ಸಂದರ್ಭದಲ್ಲಿ ನಮ್ಮ ಮಾತನ್ನೂ ಪರಿಗಣಿಸಬೇಕೆಂದು ಸಂಸದರು ಒತ್ತಾಯಿಸಿದ್ದಾರೆ.
ಅಲ್ಲದೆ ಸಂಸದರಾದ ಕೆ.ಎಚ್.ಮುನಿಯಪ್ಪ , ಬಿ.ಕೆ.ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷ ಗಾದಿಯ ರೇಸ್‍ನಲ್ಲಿದ್ದಾರೆ. ದಲಿತ ಸಮುದಾಯದ ಪರಮೇಶ್ವರ್ ಅವರು ಈಗಾಗಲೇ ಉಪಮುಖ್ಯಮಂತ್ರಿ ಆಗಿರುವುದರಿಂದ ಅದೇ ಸಮುದಾಯದವರಾದ ಕೆ.ಎಚ್.ಮುನಿಯಪ್ಪ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವುದು ಅನುಮಾನ. ಹಾಗಾಗಿ ಪರಮೇಶ್ವರ್ ಅವರ ಬಣ ಬಿ.ಕೆ.ಹರಿಪ್ರಸಾದ್ ಅವರ ಬೆಂಬಲಕ್ಕೆ ನಿಂತಿದೆ ಎಂದು ಹೇಳಲಾಗಿದೆ.
ಈಡಿಗ ಸಮುದಾಯದವರಾದ ಬಿ.ಕೆ.ಹರಿಪ್ರಸಾದ್ ಅವರನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಹಲವರ ಒತ್ತಾಯವಾಗಿದೆ.
ಹಿಂದುಳಿದವರನ್ನು ಅಧ್ಯಕ್ಷರನ್ನಾಗಿ ಮಾಡುವುದಾದರೆ, ಮುಂಬರುವ 2019ರ ಲೋಕಸಭಾ ಚುನಾವಣೆಗೆ ಪ್ರಧಾನಿ ಮೋದಿ ಅವರನ್ನು ಸಮರ್ಥವಾಗಿ ಎದುರಿಸುವ ಚಾತಿ ಇರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಏಕೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬಾರದು ಎಂದು ಮತ್ತೊಂದು ಬಣ ಚಿಂತನೆ ನಡೆಸಿದೆ.
ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ದಿನೇಶ್ ಗುಂಡೂರಾವ್ ಅವರನ್ನು ಕಾರ್ಯಾಧ್ಯಕ್ಷ ಹುದ್ದೆಯಲ್ಲೇ ಮುಂದುವರೆಸಿ ಚುನಾವಣೆಗೆ ಹೋಗಬೇಕೆಂಬುದು ಹಲವರ ಒತ್ತಾಸೆಯಾಗಿದೆ.
ಸಿದ್ದರಾಮಯ್ಯ ಅವರು ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಹಾಗೂ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ ಅವರಿಗೆ ಮತ್ತೊಂದು ಹುದ್ದೆಯನ್ನು ಹೈಕಮಾಂಡ್ ನೀಡಲಿದೆಯೇ..?
ಪಕ್ಷದ ಹೈಕಮಾಂಡ್ ಲಿಂಗಾಯತರಿಗೆ ಅಥವಾ ಒಕ್ಕಲಿಗ ಮುಖಂಡರಿಗೆ ಈ ಪಟ್ಟ ನೀಡಬೇಕೆಂದು ತೀರ್ಮಾನಿಸಿತ್ತು.
ಆದರೆ ಸಚಿವ ಸ್ಥಾನ ವಂಚಿತರಾಗಿರುವ ಎಂ.ಬಿ.ಪಾಟೀಲ್ ಅವರು ಈ ಹುದ್ದೆ ವಹಿಸಿಕೊಳ್ಳಲು ಅದೇಕೋ ಹಿಂದೇಟು ಹಾಕುತ್ತಿದ್ದಾರೆಂದು ಕೇಳಿಬಂದಿದೆ. ಇನ್ನೂ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಭಾಗವಾಗಿದ್ದಾರೆ. ಎರಡೂ ಹುದ್ದೆಗಳನ್ನು ನೀಡುವುದಾದರೆ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬಹುದು.
ಒಬ್ಬರಿಗೆ ಒಂದೇ ಹುದ್ದೆ ಎಂಬ ಮಾನದಂಡ ಅನುಸರಿಸಿದರೆ ಡಿ.ಕೆ.ಶಿವಕುಮಾರ್ ಅವರಿಗೆ ಈ ಹುದ್ದೆ ಸಿಗುವುದು ಅನುಮಾನವಾಗುತ್ತದೆ. ಒಟ್ಟಾರೆ ರೇಸ್‍ನಲ್ಲಿ ದಿನೇಶ್‍ಗುಂಡೂರಾವ್, ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ , ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್ ಅವರ ಹೆಸರುಗಳೂ ಕೇಳಿಬಂದಿವೆ.
ಹಲವರು ಹಲವರ ಬೆಂಬಲಕ್ಕೆ ನಿಂತಿದ್ದಾರೆ ಹೈಕಮಾಂಡ್ ಯಾರನ್ನು ಅಧ್ಯಕ್ಷರನ್ನಾಗಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು.
ಜೂನ್ 14ಕ್ಕೆ ಹಲವು ಶಾಸಕರು, ರಾಜ್ಯ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಹುದ್ದೆ ಸಂಬಂಧ ಹೈಕಮಾಂಡ್‍ನೊಂದಿಗೆ ಚರ್ಚಿಸಲು ದೆಹಲಿಗೆ ತೆರಳಲಿದ್ದಾರೆ.
2019ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು, ಸದೃಢಗೊಳಿಸಬೇಕು, ಸಮರ್ಥವಾಗಿ ಚುನಾವಣೆ ಎದುರಿಸುವ ನಾಯಕತ್ವವನ್ನು ಕೊಡಬೇಕಾದ ಹೊಣೆ ಹೈಕಮಾಂಡ್ ಮುಂದಿದೆ.
ಜಾತಿ, ಸಾಮಾಜಿಕ ನ್ಯಾಯ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತಹ ನಾಯಕನಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಬೇಕು. ಹಾಗಾಗಿ ಈ ಹುದ್ದೆ ಯಾರಿಗೆ ಸಿಗಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.