ಬಿಡಿಎಗೆ ಭೂಮಿ ನೀಡಿದ್ದ ರೈತರಿಗೆ ವಿಶೇಷ ಪ್ರೋತ್ಸಾಹ ನಿವೇಶನಕ್ಕೆ ಬದಲಾಗಿ ಮಾರ್ಗಸೂಚಿ ದರದಂತೆ ಪರಿಹಾರ: ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಆಕ್ರೋಶ

 

ಬೆಂಗಳೂರು, ಜೂ.11- ಬಿಡಿಎಗೆ ಭೂಮಿ ನೀಡಿದ್ದ ರೈತರಿಗೆ ನಿಯಮಾವಳಿ ಪ್ರಕಾರ ನೀಡಲಾಗುತ್ತಿದ್ದ ವಿಶೇಷ ಪ್ರೋತ್ಸಾಹ ನಿವೇಶನಕ್ಕೆ ಬದಲಾಗಿ ಮಾರ್ಗಸೂಚಿ ದರದಂತೆ ಪರಿಹಾರ ಪಾವತಿಸುವಂತೆ ಸುತ್ತೋಲೆ ಹೊರಡಿಸುವ ಮೂಲಕ ಸರ್ಕಾರ ಭೂಮಿ ನೀಡಿದ ರೈತರ ಕುಟುಂಬದವರು ವಿಷವುಣ್ಣುವಂತೆ ಮಾಡಿದೆ ಎಂದು ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಆರೋಪಿಸಿದೆ.

ಬೆಂಗಳೂರಿನ ಅಂಜನಾಪುರ, ಬನಶಂಕರಿ 6ನೆ ಹಂತ, ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ರಚಿಸಿದಾಗ ಅಧಿಸೂಚನೆ ಹೊರಡಿಸಿ ಈ ಮೂರೂ ಬಡಾವಣೆಗಳ ರೈತರಿಗೆ ಪ್ರತಿ ಎಕರೆಗೆ 6 ಲಕ್ಷ ರೂ. ಪರಿಹಾರ ಹಾಗೂ ವಿಶೇಷ ಪ್ರೋತ್ಸಾಹವಾಗಿ 40 x 60 ಅಳತೆಯ ನಿವೇಶನವನ್ನು ಅಂದಿನ ಹಂಚಿಕೆ ದರದ ಶೇ.25ರಷ್ಟು ದರದಲ್ಲಿ ನೀಡಲು ಬಿಡಿಎ ನಿಯಮಾವಳಿ ರೂಪಿಸಿತ್ತು. ಅದೇ ನಿಯಮಾವಳಿಯೇ ಇಲ್ಲಿಯವರೆಗೂ ನಡೆದುಕೊಂಡು ಬಂದಿದ್ದು, ಇತ್ತೀಚೆಗೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಬಿಡಿಎನಿಂದ ಸುತ್ತೋಲೆ ಹೊರಡಿಸಿ ಪ್ರಾಧಿಕಾರಕ್ಕೆ ಭೂಮಿ ನೀಡಿದ್ದ ರೈತರಿಗೆ ಇನ್ನು ಮುಂದೆ ವಿಶೇಷ ಪೆÇ್ರೀ ನಿವೇಶನ ಪಡೆಯಲು ಮಾರ್ಗಸೂಚಿ ದರ ಪಾವತಿಸುವಂತೆ ಆದೇಶ ಹೊರಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡಾವಣೆಗಾಗಿ ಭೂಮಿ ನೀಡಿದ ರೈತ ಇಂದು ನಿವೇಶನ ಪಡೆಯಲು ಕನಿಷ್ಟವೆಂದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 72 ಲಕ್ಷ ಪಾವತಿಸಬೇಕಾಗುತ್ತದೆ. ಇದರೊಂದಿಗೆ ನೋಂದಣಿ, ಮುದ್ರಾಂಕ ಶುಲ್ಕಕ್ಕಾಗಿ ಸುಮಾರು 5 ಲಕ್ಷ ವೆಚ್ಚವಾಗುತ್ತದೆ. ಈಗಾಗಲೇ ಭೂಮಿ ಪಡೆದುಕೊಂಡಿರುವ ಈ ರೈತ ಕುಟುಂಬದವರು ಇಷ್ಟು ಮೊತ್ತದ ಹಣ ನೀಡಿ ನಿವೇಶನ ಖರೀದಿಸಲು ಸಾಧ್ಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲೂ ಪ್ರತಿ ಎಕರೆಗೆ ಪರಿಹಾರದೊಂದಿಗೆ ಕಡಿಮೆ ದರದ ನಿವೇಶನ ನೀಡುವುದನ್ನು ತಪ್ಪಿಸಿ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿಡಿಎನಂತಹ ಸಾರ್ವಜನಿಕ ಸಂಸ್ಥೆಯೇ ತಾನು ರೂಪಿಸಿದ ನಿಯಮಾವಳಿಯನ್ನು ಬದಲಿಸಿ ರೈತರಿಗೆ ವಂಚಿಸಿ ಇನ್ನು ಯಾರನ್ನು ನಂಬಿ ರೈತ ಭೂಮಿ ಕೊಡುತ್ತಾನೆ ಎಂದು ವೇದಿಕೆ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಹೇಳಿದರು.
ಈ ಕೂಡಲೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಡಿಎ ಹೊರಡಿಸಿರುವ ಸುತ್ತೋಲೆ ಹಿಂಪಡೆಯುವಂತೆ ಮತ್ತು ಈ ಹಿಂದಿನ ನಿಯಮಾವಳಿಯಂತೆ ಭೂಮಿ ನೀಡಿದ ರೈತರಿಗೆ ಅಲ್ಪ ಬೆಲೆಗೆ ಭೂಮಿ ನೀಡಬೇಕು. ಇಂತಹ ಸುತ್ತೋಲೆ ಹೊರಡಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ