ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ: ಜೂ 15ರಿಂದ 20ರವರೆಗೆ ರಾಜ್ಯಾದ್ಯಂತ ಐದು ಕಡೆ ಬೈಕ್ ರ್ಯಾಲಿ

 

ಬೆಂಗಳೂರು, ಜೂ.11-ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ, ಇದೇ 15ರಿಂದ 20ರವರೆಗೆ ರಾಜ್ಯಾದ್ಯಂತ ಐದು ಕಡೆ ಬೈಕ್ ರ್ಯಾಲಿ ನಡೆಸಲು ತೀರ್ಮಾನಿಸಿದೆ.
ಇದೇ 15ರಿಂದ 20ರವರೆಗೆ ರಾಜ್ಯದ 224 ಕ್ಷೇತ್ರಗಳಿಗೆ ಅನ್ವಯವಾಗುವಂತೆ ಐದು ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ ನಡೆಯಲಿದೆ.

ರ್ಯಾಲಿಯಲ್ಲಿ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮಾಡಿರುವ ಸಾಧನೆಗಳು ಹಾಗೂ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅಪವಿತ್ರ ಮೈತ್ರಿಯನ್ನು ಜನರಿಗೆ ಮನವರಿಕೆ ಮಾಡಿಕೊಡುವುದೇ ಇದರ ಮುಖ್ಯ ಉದ್ದೇಶ.
2019ರ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಪ್ರತಿಯೊಂದು ರಾಜ್ಯಗಳಲ್ಲೂ ಈಗಿನಿಂದಲೇ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಕೊಟ್ಟಿದ್ದರು.
ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಕೇಂದ್ರ ಸಚಿವ ಪಿಯೂಶ್‍ಗೋಯೆಲ್ ಅವರನ್ನು ಭೇಟಿ ಮಾಡಿದ ವೇಳೆ ಲೋಕಸಭೆ ಚುನಾವಣೆಗೆ ಪಕ್ಷ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಲಹೆ ಮಾಡಿದ್ದರು.

ಇದರನ್ವಯ ಮೂರು ದಿನಗಳ ಹಿಂದೆ ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿದ್ದ ಯಡಿಯೂರಪ್ಪ, ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಯುವ ಮೋರ್ಚಾ ಕಾರ್ಯಕರ್ತರು ಸಜ್ಜಾಗುವಂತೆ ಕರೆಕೊಟ್ಟಿದ್ದರು.
ಈಗ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬೈಕ್ ರ್ಯಾಲಿ ನಡೆಸುವ ಮೂಲಕ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಿದೆ. ಎನ್‍ಡಿಎ ಸರ್ಕಾರ ಜಾರಿ ಮಾಡಿದ್ದ ಜನಧನ್, ಫಸಲ್‍ಭೀಮಾ, ಸುಕನ್ಯ ಸಮೃದ್ಧಿ, ಬೇಟಿ ಪಡಾವೋ-ಬೇಟಿ ಬಚಾವೊ, ಉಜ್ವಲ್ ಸೇರಿದಂತೆ ಮತ್ತಿತರ ಪ್ರಮುಖ ಯೋಜನೆಗಳನ್ನು ಜನರ ಬಳಿ ಕೊಂಡೊಯ್ಯಲಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಸರ್ಕಾರ ರಚನೆಗೆ ಕೆಲವೇ ಸ್ಥಾನಗಳ ಕೊರತೆ ಎದುರಾಗಿತ್ತು.
ವಿಧಾನಸಭೆ ಚುನಾವಣೆಗೂ ಮುನ್ನ ಪರಸ್ಪರ ಹಾವು-ಮುಂಗುಸಿಯಂತೆ ಕಿತ್ತಾಡಿದ್ದ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ, ಅವಕಾಶವಾಧಿತನವನ್ನು ಬಿಜೆಪಿ ಮನವರಿಕೆ ಮಾಡಲಿದೆ.
ಈಗಾಗಲೇ ಬೈಕ್ ರ್ಯಾಲಿ ಯಶಸ್ವಿಗೆ ಜಿಲ್ಲಾ ಘಟಕಗಳು ಎಲ್ಲಾ ರೀತಿಯ ಸಿದ್ದತೆಗಳನ್ನು ಪೂರ್ಣಗೊಳಿಸಬೇಕೆಂದು ಖುದ್ದು ಯಡಿಯೂರಪ್ಪನವರೇ ಸೂಚನೆ ಕೊಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ