ಬನವಾಸಿ:
ಬನವಾಸಿ ನಾಗಶ್ರೀ ಪ್ರೌಢಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಇಂಗ್ಲಿಷ್ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ವರಲಕ್ಷ್ಮೀ ಎಸ್. ಹೆಗಡೆಯವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಶಾಲೆಯ ಸಭಾಂಗಣದಲ್ಲಿ ಇತ್ತೀಚಿಗೆ ನೆರವೇರಿತು.
ಶಿರಸಿ ತಾಲೂಕಾ ಪಂಚಾಯತ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿ.ಪಂ.ಸದಸ್ಯೆ ರೂಪಾ ನಾಯ್ಕ ಮತ್ತು ಶಾಲಾ ಆಡಳಿತ ಕಮಿಟಿ ಹಾಗೂ ಸಿಬ್ಬಂದಿ ವರ್ಗದವರು ವರಲಕ್ಷ್ಮೀ ಎಸ್. ಹೆಗಡೆಯವರಿಗೆ ಶಾಲು ಹೊದೆಸಿ, ಹಾರ ಹಾಗೂ ಮೈಸೂರು ಪೇಟ ಧರಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ.ಅಧ್ಯಕ್ಷೆ ಕಾಳೇರಮನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತೆ ಪ್ರಾಮಾಣಿಕವಾಗಿ ಸೇವೆ ನೀಡಿದ ವರಲಕ್ಷ್ಮೀ ಎಸ್. ಹೆಗಡೆ ಮಾದರೀ ಶಿಕ್ಷಕಿ ಎಂದು ಬಣ್ಣಿಸಿದರು. ಜಿ.ಪಂ.ಸದಸ್ಯೆ ರೂಪಾ ನಾಯ್ಕ ಮಾತನಾಡಿ, ಎಲ್ಲರಲ್ಲಿ ಕೂಡಾ ಪ್ರತಿಭೆ ಇದ್ದೇ ಇರುತ್ತದೆ. ಅದು ಹೊರಗೆ ಪ್ರಜ್ವಲಿಸಲು ಕೆಲವು ಸಂದರ್ಭಗಳು, ಕೆಲವು ವೇದಿಕೆಗಳು, ಕೆಲವು ಜನರು ಕಾರಣೀಕರ್ತರಾಗುತ್ತಾರೆಂದರು.
ಅಧ್ಯಕ್ಷೀಯ ಭಾಷಣ ಮಾಡಿದ ಶಾಲಾ ಅಧ್ಯಕ್ಷ ದೀಪಕ ಜಿ. ಬಂಗ್ಲೆ ನಾಗಶ್ರೀ ಶಾಲೆ ಆರಂಭವಾಗಿ 25 ವರ್ಷ ದಾಟುತ್ತಿದೆ. ಅಲ್ಲಿಂದ ಇಲ್ಲಿಯವರೆಗೆ ಶಾಲೆ ನಡೆಸಿದ್ದು ನೆನಪಿಸಿಕೊಂಡರೆ, ಕಷ್ಟ ಕಾಲದ ಸಂದರ್ಭ ನೆನೆಸಿದರೆ ನಾವು ಇಷ್ಟು ಬೆಳೆದೆವಾ ಎಂದು ಆಶ್ಚರ್ಯವಾಗುತ್ತದೆ. ಅಲ್ಲಿಂದ ಇಲ್ಲಿಯವರೆಗೆ ವರಲಕ್ಷ್ಮೀ ಹೆಗಡೆಯವರು ಕಾರ್ಯ ಮಾಡಿದ್ದಾರೆ. ನಮ್ಮಲ್ಲಿ 6ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶೇ. 80 ಕ್ಕೂ ಹೆಚ್ಚು ಅಂಕ ಗಳಿಸಿದ್ದರೆ ಪ್ರಥಮವಾಗಿ ಬಂದವಳು 93% ಪರ್ಸಂಟ್ ಮಾಡಿದ್ದಾರೆ. ಶಾಲೆಯ ಪ್ರಗತಿ ಉತ್ತಮವಾಗಿ ಬರುತ್ತಿರುವುದು ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗದವರ ಹಾಗೂ ವಿದ್ಯಾರ್ಥಿಗಳ ಪ್ರಯತ್ನದ ಫಲವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಸಮಿತಿ ಸದಸ್ಯ, ಪತ್ರಕರ್ತ ಉದಯಕುಮಾರ ಕಾನಳ್ಳಿ ಬನವಾಸಿ ವಲಯದಲ್ಲಿ ಪಠ್ಯ ಹಾಗೂ ಪಠ್ಯೇತರ ಎರಡರಲ್ಲೂ ಸಾಧನೆ ಮಾಡಿದ ನಾಗಶ್ರೀ ಶಾಲೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ದಾಖಲೆ ಮಾಡಬೇಕೆಂದರು. ಕ್ರೀಡೆಯಲ್ಲಿ ಜಿಲ್ಲಾ ಮಟ್ಟದ ದಾಖಲೆ ಪಡೆದಿರುವುದು ಅತ್ಯಂತ ಸಂತೋಷವೆಂಧರು. ಮುಖ್ಯ ಅತಿಥಿಗಳಾದ ಡಿ.ಎಸ್.ಎಸ್.ರಾಜ್ಯ ನಾಯಕ ಬಿ. ಶಿವಾಜಿ ಮಾತನಾಡಿ, ಶೈಕ್ಷಣಿಕವಾಗಿ ಹಂತ ಹಂತವಾಗಿ ಮೇಲಕ್ಕೆ ಬಂದ ನಾಗಶ್ರೀ ಶಾಲೆ ದಾಖಲೆಯ ಸಾಧನೆ ಕೊಂಡಾಡಿದರು. ಸನ್ಮಾನ ಸ್ವೀಕರಿಸಿದ ವರಲಕ್ಷ್ಮೀ ಎಸ್. ಹೆಗಡೆ ಮಾತನಾಡಿದರು.
ಶಾಲೆಗೆ ಪ್ರಥಮವಾಗಿ ಬಂದ ಸುಷ್ಮಾ ರವಿ ನಾಯ್ಕ (93%), ದ್ವಿತೀಯ ಬಂದ ಪ್ರಿಯಾಂಕಾ ಜೋಗಿ (ಶೇ.85.6), ರಾಜೇಶ್ವರಿ ವಡ್ಡರ (85.6%) ಮಧುಮತಿ ನಾಯ್ಕ ( 85.40%) ಹರ್ಷಿತಾ ಉದಯ ಬಂಗ್ಲೆ (ಶೇ.80), ಪ್ರಿಯಾಂಕ ಗೌಡ (ಶೇ.80) ಇವರೆಲ್ಲರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿಂದಿಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಕ್ಕಾಗಿ ಮುಖ್ಯಾಧ್ಯಾಪಕ ಶ್ರೀಧರ ಜಿ. ನಾಯ್ಕ ಇವರು ನೀಡಿದ ಪುರಸ್ಕಾರ, ಶಾಲೆಗೆ ಪ್ರಥಮ ಬಂದವರಿಗೆ ಶಿವಾನಂದ ದೀಕ್ಷಿತ ಹಾಗೂ ಕೃಷ್ಣರಾಯ ಕಾನಳ್ಳಿ, ದ್ವಿತೀಯ ಬಂದವರಿಗೆ ಉದಯಕುಮಾರ ಕಾನಳ್ಳಿ ಕೊಟ್ಟ ಬಹುಮಾನವನ್ನು ನೀಡಲಾಯಿತು.
ಶಾಲಾ ಮುಖ್ಯಾಧ್ಯಾಪಕ ಶ್ರೀಧರ ಜಿ. ನಾಯ್ಕ ಮಾತನಾಡಿ, ನಾಗಶ್ರೀ ಶಾಲೆ ಉನ್ನತ ಮಟ್ಟಕ್ಕೆ ಬರಲಿಕ್ಕೆ ಶಿಕ್ಷಕ ಬಳಗದ ಸಂಪೂರ್ಣ ಪ್ರಯತ್ನ, ಮಕ್ಕಳ ಸ್ಪಂದನ ಕಾರಣವಾಗಿದೆ ಎಂದರು. ಶಾಲೆಯ ಪ್ರಧಾನ ಕಾರ್ಯದರ್ಶಿ ಮುದ್ದಪ್ಪ ಕೆ. ನಾಯ್ಕ, ಕಾಂಗ್ರೆಸ್ ಮುಖಂಡ ಗಣಪತಿ ಆಯ್. ನಾಯ್ಕ, ಶಿಕ್ಷಕರಾದ ಚಂದ್ರಕಾಂತ ಡಿ. ನಾಯ್ಕ, ಕೆ.ಸ್.ಬ್ಯಾತನಾಳ, ರೇಖಾ ಭಟ್ ವೇದಿಕೆಯಲ್ಲಿದ್ದರು. ಚಂದ್ರಕಾಂತ ಡಿ. ನಾಯ್ಕ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.