ಗೌರಿ ಹತ್ಯೆ ಆರೋಪಿಗಳ ವಿಚಾರಣೆ ನಡೆಸಲಿರುವ ಸಿಬಿಐ, ಮಹಾರಾಷ್ಟ್ರ ಎಸ್ ಐಟಿ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಮತ್ತು ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಶಂಕಿತ ಆರೋಪಿಗಳನ್ನು ಬಂಧಿಸಿರುವಂತೆಯೇ ಅತ್ತ ಬೆಂಗಳೂರಿಗೆ ಸಿಬಿಐ ಮತ್ತು ಮಹಾರಾಷ್ಟ್ರ ವಿಶೇಷ ತನಿಖಾದಳದ ಅಧಿಕಾರಿಗಳು ಆಗಮಿಸಿದ್ದಾರೆ.

ಪ್ರಸ್ತುತ ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಶಂಕಿತ ಆರೋಪಿಗಳನ್ನು ಸಿಬಿಐ ಮತ್ತು ಮಹಾರಾಷ್ಟ್ರ ಎಸ್ ಐಟಿ ಅಧಿಕಾರಿಗಳು ತನಿಖೆಗೊಳಪಡಿಸಲಿದ್ದು, ಮಹಾರಾಷ್ಟ್ರದಲ್ಲಿ ನಡೆದ ವಿಚಾರವಾದಿ ಪನ್ಸಾರೆ ಮತ್ತು ಧಾಬೋಲ್ಕರ್ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ. ಗೌರಿ ಪ್ರಕರಣದಲ್ಲಿ ಪ್ರಸ್ತುತ ಬಂಧಿತರಾಗಿರುವ ಶಂಕಿತ ಹಂತಕರಿಗೂ ಪನ್ಸಾರೆ, ಧಾಬೋಲ್ಕರ್ ಹತ್ಯೆಗೂ ಸಂಬಂಧವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಈಗಾಗಲೇ ಆರೋಪಿಗಳನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು, ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ಈ ಮ್ಯಾರಥಾನ್ ವಿಚಾರಣೆ ವೇಳೆ ಶಂಕಿತ ಆರೋಪಿಗಳು ಹಲವು ಅಂಶಗಳ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಮರಾಠಿಯಲ್ಲೇ ಪ್ರಶ್ನೆ ಕೇಳಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳ ನೆರವಿನಿಂದ ಶಂಕಿತ ಆರೋಪಿಗಳು ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ವಿಚಾರವಾದಿ ಎಂಎಂ ಕಲಬುರ್ಗಿ ಹತ್ಯೆ ಸಂಬಂಧ ಭಾನುವಾರ ಎಲ್ಲ ನಾಲ್ಕೂ ಶಂಕಿತ ಆರೋಪಿಗಳನ್ನು ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ವಿಚಾರಣೆ ಸಂಬಂಧ ಅಧಿಕಾರಿಗಳು ಮಾಧ್ಯಮಗಳಿಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ.

ಇನ್ನು ಪ್ರೊಫೆಸರ್ ಕೆಎಸ್ ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿರುವ ಮತ್ತು ಪ್ರಸ್ತುತ ನಾಪತ್ತೆಯಾಗಿರುವ ಮತ್ತೋರ್ವ ಆರೋಪಿ ದಾದಾ ಅಲಿಯಾಸ್ ನಿಹಾಲ್ ಕುರಿತು ಅಧಿಕಾರಿಗಳು ಪ್ರಶ್ನೆ ಮಾಡಿದ್ದು, ಆತನ ಹುಡುಕಾಟದ ಸಂಬಂಧ ನಡೆದ ತನಿಖೆಯ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ