ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ ಉಭಯ ಬಣಗಳು ಮತ್ತೆ ಒಂದಾಗಿವೆ. ನಾರಾಯಣಗೌಡ ಮತ್ತು ಪ್ರವೀಶ್ ಶೆಟ್ಟಿ ಬಣ ಒಂದಾಗುವ ಮೂಲಕ ರಾಜ್ಯದ ಪ್ರಮುಖ ಕನ್ನಡಪರ ಸಂಘಟನೆ ಒಗ್ಗಟ್ಟು ಪ್ರದರ್ಶಿಸಿದೆ.
ಹೌದು, ಕಳೆದ 12 ವರ್ಷಗಳ ಹಿಂದೆ ಪರಸ್ಪರ ವೈಮನಸ್ಸಿನ ಕಾರಣದಿಂದ ವಿಭಜನೆಯಾದ ಕರ್ನಾಟಕ ರಕ್ಷಣಾ ವೇದಿಕೆ ಈಗ ಮತ್ತೆ ಒಂದಾಗಿವೆ. ಇದಕ್ಕೆ ವೇದಿಕೆಯಾಗಿದ್ದು ಟಿ.ಎ.ನಾರಾಯಣಗೌಡ ಅವರ ಹುಟ್ಟುಹಬ್ಬದ ಸಂಭ್ರಮ.
ಒಂದು ಬಣದ ನೇತೃತ್ವ ವಹಿಸಿರುವ ಟಿ.ಎ.ನಾರಾಯಣಗೌಡ ಅವರ ಹುಟ್ಟುಹಬ್ಬದ ನಿಮಿತ್ತ ಮತ್ತೊಂದು ಬಣದ ನೇತೃತ್ವ ವಹಿಸಿರುವ ಪ್ರವೀಣ್ ಶೆಟ್ಟಿ ನಾರಾಯಣಗೌಡ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದ್ದಾರೆ. ಆ ಮೂಲಕ ಉಭಯ ಬಣಗಳ ನಾಯಕರು 12 ವರ್ಷದ ಬಳಿಕ ಮುಖಾಮುಖಿಯಾಗಿದ್ದು, ಪರಸ್ಪರ ಉಭಯ ಕುಶಲೋಪರಿ ಮಾಡಿದ್ದಾರೆ.
ನಂತರ ಎರಡೂ ಬಣಗಳನ್ನು ಒಂದುಗೂಡಿಸುವ ನಿರ್ಧಾರ ಕೈಗೊಂಡು ಕರವೇ ಕಾರ್ಯಕರ್ತರಲ್ಲಿ ಹರ್ಷ ಮೂಡಿಸಿದ್ದಾರೆ. ಕನ್ನಡಪರ ಹೋರಾಟದಲ್ಲಿ ಉಭಯ ಬಣಗಳು ಪ್ರತ್ಯೇಕವಾಗಿ ಹೋರಾಟ ಮಾಡುತ್ತಿದ್ದ ಕಾರಣ ಹೋರಾಟ ಅಷ್ಟೊಂದು ಪರಿಣಾಮಕಾರಿಯಾಗಿ ಇರುತ್ತಿರಲಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇದೀಗ ಉಭಯ ಬಣಗಳ ಒಗ್ಗೂಡುವಿಕೆ ಕರವೇಗೆ ಮತ್ತಷ್ಟು ಬಲ ತಂದುಕೊಟ್ಟಿದೆ.
ಈ ಕುರಿತು ಮಾತನಾಡಿದ ಟಿ.ಎ.ನಾರಾಯಣಗೌಡ, ಕರ್ನಾಟಕದ ಪರ ಕೆಲಸ ಮಾಡುವ ಎಲ್ಲ ಮನಸ್ಸುಗಳು ಒಗ್ಗೂಡಬೇಕು. ಆ ಮೂಲಕ ಕನ್ನಡಪರ ಹೋರಾಟಕ್ಕೆ ಮತ್ತಷ್ಟು ಶಕ್ತಿ ತಂದುಕೊಡಬೇಕು ಎನ್ನುವ ಕಲ್ಪನೆ ಹೊಂದಿದ್ದೆ. ಕೆಲ ಪ್ರತಿಷ್ಠೆಯ ಕಾರಣದಿಂದ ಉಭಯ ಬಣಗಳ ಒಗ್ಗೂಡುವಿಕೆಗೆ ಕಾಲ ಕೂಡಿಬಂದಿರಲಿಲ್ಲ. ಈಗ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸನ್ನಿವೇಶ ಎದುರಿಗಿರುವ ಸಂದರ್ಭದಲ್ಲಿ ನನ್ನ ಎಲ್ಲ ಗೆಳೆಯರು ಸೇರಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು