ನವದೆಹಲಿ, ಜೂ.10-ಭಾರತೀಯರ ಬಳಿ ಇರುವ ನಗದು ಈಗ ದಾಖಲೆಯ 18 ಲಕ್ಷ ಕೋಟಿ ರೂ.ಗಳಿವೆ. ಇದು 2016 ನವೆಂಬರ್‍ನಲ್ಲಿ ನೋಟು ಅಮಾನ್ಯೀಕರಣದ ನಂತರ ಕುಸಿದಿದ್ದ 7.8 ಲಕ್ಷ ಕೋಟಿ ರೂ.ಗಳಿಗಿಂತ ಎರಡು ಪಟ್ಟಿಗಿಂತಲೂ ಅಧಿಕವಾಗಿದೆ.
ಈ ಕುರಿತ ಅಂಕಿ-ಅಂಶಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ನೀಡಿದೆ. ಇದೇ ವೇಳೆ ಆರ್‍ಬಿಐನಿಂದ ಚಲಾವಣೆಗೆ ಬಿಡುಗಡೆ ಮಾಡಲಾದ ಒಟ್ಟು ಕರೆನ್ಸಿಯು 19.3 ಲಕ್ಷ ಕೋಟಿಗಳಷ್ಟಿದೆ. ಇದು ನೋಟು ಅಮಾನ್ಯೀಕರಣದ ನಂತರ ಆರ್‍ಬಿಐ ಚಲಾವಣೆ ಮಾಡಿದ 8.9 ಲಕ್ಷ ಕೋಟಿ ರೂ.ಗಳ ಮೊತ್ತಕ್ಕಿಂತಲೂ ದುಪ್ಪಟ್ಟು.
ಕಳೆದ ಕೆಲವು ತಿಂಗಳಿನಿಂದ ದೇಶದ ವಿವಿಧ ಭಾಗಗಳಲ್ಲಿ ವರದಿಯಾದ ನಗದು ಕೊರತೆ ಬೆನಲ್ಲೇ ಸಾರ್ವಜನಿಕರಲ್ಲಿ ಇಷ್ಟೊಂದು ಅಧಿಕ ಮಟ್ಟದ ನಗದು ಲಭ್ಯವಿರುವುದು ಇಲ್ಲಿ ಗಮನಾರ್ಹ ಸಂಗತಿ.
ಸಾರ್ವಜನಿಕರೊಂದಿಗೆ ಇರುವ ಕರೆನ್ಸಿ ಹಾಗೂ ಚಲಾವಣೆಯಲ್ಲಿರುವ ನಗದು-ಈ ಎರಡು ಅಂಕಿ-ಅಂಶಗಳು ದುಪಟ್ಟು ಆಗಿರುವುದನ್ನು ಆರ್‍ಬಿಐ ಸಾಂಖ್ಯಿಕ ಮಾಹಿತಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2016ರ ನವೆಂಬರ್ 8ರಂದು 500 ರೂ. ಹಾಗೂ 1,000 ರೂ.ಗಳ ಹಳೆ ನೋಟುಗಳನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿತ್ತು. ಆಗ ದಿನ ಬೆಳಗಾಗುವುದರ ಒಳಗೆ ಶೇ.86ರಷ್ಟು ಕರೆನ್ಸಿ ಚಲಾವಣೆ ಅನರ್ಹಗೊಂಡಿತ್ತು. ರದ್ದಾದ ಕರೆನ್ಸಿಗಳನ್ನು ಹಿಂದಿರುಗಿಸಲು ಸಮಯ ನೀಡಲಾಗಿತ್ತು. ಆ ಸಮಯದಲ್ಲಿ ಶೇ99ರಷ್ಟು ನಿರ್ಬಂದಿತ ನೋಟುಗಳು ಹಿಂದಿರುಗಿಸಲ್ಪಟ್ಟಿದ್ದವು.
ಈ ಸಂದರ್ಭ ಆರ್‍ಬಿಐ ಇತ್ತೀಚೆಗೆ ಬಹಿರಂಗಗೊಳಿಸಿದ ಮಾಹಿತಿಯಲ್ಲಿ, ರದ್ದಾದ 15.44 ಲಕ್ಷ ಕೋಟಿ ಕರೆನ್ಸಿಯಲ್ಲಿ ಜೂನ್ 30, 2017ರವರೆಗೆ 15.28 ಲಕ್ಷ ಕೋಟಿ ರೂ. ಹಳೆ ನೋಟುಗಳು ಹಿಂದಿರುಗಿವೆ. ಅಂದರೆ ಬ್ಯಾಂಕಿಂಗ್ ವ್ಯವಸ್ಥೆಗೆ ಶೇ.98.96 ಪ್ರಮಾಣದಷ್ಟು ರದ್ದಾದ ನೋಟುಗಳು ಮರಳಿವೆ ಎಂದು ತಿಳಿಸಲಾಗಿತ್ತು.