
ಸೆಂಟ್ ಪೀಟರ್ಸ್ಬರ್ಗ್: ಈ ಬಾರಿಯ ಫುಟ್ಬಾಲ್ ವಿಶ್ವಕಪ್ ಟೂರ್ನಿಯ ಅಧಿಕೃತ ಭವಿಷ್ಯಕಾರನಾಗಿ ಅಚಿಲ್ಸ್ ಎಂಬ ಹೆಸರಿನ ಬೆಕ್ಕು ಕೆಲಸ ಮಾಡಲಿದೆ!
ದಕ್ಷಿಣ ಆಫ್ರಿಕಾದಲ್ಲಿ ನಡೆದ 2010ರ ಫಿಫಾ ವಿಶ್ವಕಪ್ನಲ್ಲಿ ನಿಖರ ಭವಿಷ್ಯ ನುಡಿಯುವ ಮೂಲಕ ಪೌಲ್ ಹೆಸರಿನ ಅಷ್ಟಪದಿ ‘ಅಕ್ಟೋಪಸ್’ ಜನಪ್ರಿಯವಾಗಿತ್ತು. ಭವಿಷ್ಯ ಹೇಳಲು ಆಹಾರ ತುಂಬಿದ ಎರಡು ಪೆಟ್ಟಿಗೆಗಳನ್ನು ಪೌಲ್ಗೆ ನೀಡಲಾಗಿತ್ತು. ಇದೇ ಹಾದಿಯಲ್ಲಿ ಭವಿಷ್ಯ ಕೇಳಲು ಅಚಿಲ್ಸ್ಗೆ ತಂಡಗಳ ಬಾವುಟಗಳು ಇರುವ ಬೋಗುಣಿಗಳನ್ನು ನೀಡಲಾಗುತ್ತದೆ.
‘ವಿಶ್ವಕಪ್ ಪಂದ್ಯಗಳ ಭವಿಷ್ಯ ಕೇಳಲು ಈ ಬಾರಿ ಅಚಿಲ್ಸ್ ಎಂಬ ಬಿಳಿ ಬಣ್ಣದ ಬೆಕ್ಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಬೆಕ್ಕಿಗೆ ಕಿವಿ ಕೇಳುವುದಿಲ್ಲ. ಈ ಬಾರಿ ಅದು ಹೇಳುವ ಭವಿಷ್ಯದ ಪ್ರಕಾರವೇ ಫಲಿತಾಂಶಗಳು ಬರಬಹುದು ಎಂಬ ನಿರೀಕ್ಷೆ ಇದೆ’ ಎಂದು ಪಶುವೈದ್ಯೆಯಾಗಿರುವ ಅನ್ನಾ ಕಸತ್ಕಿನಾ ಹೇಳಿದ್ದಾರೆ. ಅನ್ನಾ ಅವರು ಇಲ್ಲಿನ ಹರ್ಮಿಟೆಜ್ ವಸ್ತು ಸಂಗ್ರಹಾಲಯದಲ್ಲಿರುವ ಬೆಕ್ಕುಗಳಿಗೆ ಶುಶ್ರೂಷೆ ನೀಡುತ್ತಾರೆ.
‘ಭವಿಷ್ಯಕಾರನ ಕೆಲಸ ಮಾಡಲಿರುವ ಅಚಿಲ್ಸ್ ಒಂದು ತಿಂಗಳ ಕಾಲ ಈ ವಸ್ತು ಸಂಗ್ರಹಾಲಯದಲ್ಲಿ ಇರುವುದಿಲ್ಲ. ಬದಲಿಗೆ ‘ಕ್ಯಾಟ್ ರಿಪಬ್ಲಿಕ್’ ಹೆಸರಿನ ಕೆಫೆ ಯೊಂದರಲ್ಲಿ ವಾಸಿಸಲಿದೆ. ಈ ಕೆಫೆಯಲ್ಲಿದ್ದರೆ ಅದನ್ನು ನೋಡಲು ಫುಟ್ಬಾಲ್ ಅಭಿಮಾನಿಗಳಿಗೆ ಅನುಕೂಲವಾಗಲಿದೆ’ ಎಂದು ಅನ್ನಾ ತಿಳಿಸಿದ್ದಾರೆ.
2010ರ ಫಿಫಾ ವಿಶ್ವಕಪ್ ಸಂದರ್ಭದಲ್ಲಿ ಜರ್ಮನಿ ತಂಡ ಆಡಿದ 13 ಪಂದ್ಯಗಳಲ್ಲಿ 11ರ ಫಲಿತಾಂಶಗಳು ಆಕ್ಟೋಪಸ್ ಪೌಲ್ ಭವಿಷ್ಯದ ಪ್ರಕಾರವೇ ಇದ್ದವು. ಜೊತೆಗೆ ಆಗಿನ ಫೈನಲ್ ಪಂದ್ಯದಲ್ಲಿ ಸ್ಪೇನ್ ಗೆಲ್ಲಲಿದೆ ಎಂದು ಪೌಲ್ ಹೇಳಿತ್ತು. ಆ ವಿಶ್ವಕಪ್ನಲ್ಲಿ ಸ್ಪೇನ್ ಪ್ರಶಸ್ತಿ ಗೆದ್ದಿತ್ತು.