ಭೂ ನಡುಗಿಸಿದ ಮೆಕ್ಸಿಕೋ ಫ್ಯಾನ್ಸ್‌ಗಳ ಸಂಭ್ರಮಾಚರಣೆ!

ಮೆಕ್ಸಿಕೋ: ಫುಟ್‌ಬಾಲ್ ಜ್ವರ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಭಾರತದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳು ಫುಟ್‌ಬಾಲ್‌ ವಿಶ್ವಕಪ್ ವೀಕ್ಷಿಸುತ್ತಿದ್ದಾರೆ. ಅಚ್ಚರಿಯೆಂದರೆ ಭಾನುವಾರ ನಡೆದಿದ್ದ ಜರ್ಮನಿ ಮತ್ತು ಮೆಕ್ಸಿಕೋ ನಡುವಣ ಪಂದ್ಯದಲ್ಲಿ ಜರ್ಮನಿ ವಿರುದ್ಧ ಮೆಕ್ಸಿಕೋ ಒಂದು ಗೋಲು ಬಾರಿಸುತ್ತಲೇ ಅಲ್ಲಿ ಲಘು ಭೂಕಂಪ ಆಗುವಷ್ಟರ ಮಟ್ಟಿಗೆ ಸಂಭ್ರಮ ಮುಗಿಲು ಮುಟ್ಟಿತ್ತು.

ಪಂದ್ಯ ಆರಂಭವಾಗಿ 35 ನಿಮಿಷ ಆಗುತ್ತಲೇ, ಮೆಕ್ಸಿಕೋದ ಲೋಝಾನೊ ಜರ್ಮನಿ ವಿರುದ್ಧ ಗೋಲ್ ಹೊಡೆಯುತ್ತಲೇ, ಮೆಕ್ಸಿಕೋದ ಜನತೆ ಒಮ್ಮೆಲೆ ಯೆಸ್‌ ವಿ ಡಿಡ್ ಇಟ್.. ಎಂದು ಕಿರುಚಾಡಿ, ಹಾರಿ ಕುಣಿದು ಕುಪ್ಪಳಿಸಿದ್ದಾರೆ. ಏಕಕಾಲದಲ್ಲಿ ಮೆಕ್ಸಿಕೋ ಜನರು ಸಂಭ್ರಮಿಸಿದರು. ಆ ಜಾಗದಲ್ಲಿ ಸೆನ್ಸಾರ್‌ಗಳನ್ನಿಟ್ಟಾಗ ಏಳು ಸೆಕೆಂಡ್‌ ಕಾಲ ಭೂಮಿ ಕಂಪನ ಆಗಿರುವ ಮಾಪನ ಕಂಡುಬಂದಿದೆ. ಇದೊಂದು ರೀತಿಯ ಕೃತಕ ಭೂಕಂಪ ಎಂದಾಗಿತ್ತು. ದಿ ಇನ್ಸಿಟ್ಯೂಟ್ ಆಫ್ ಜಿಯೋಲಾಜಿಕಲ್ ಇನ್‌ವೆಸ್ಟಿಗೇಶನ್ಸ್‌ ಸಂಸ್ಥೆಯ ಭೂಕಂಪ ಮಾಪನ ಸೆನ್ಸಾರ್‌ಗಳು ಅದನ್ನು ಗ್ರಹಿಸಿವೆ.

ಮೆಕ್ಸಿಕೋದ ಜನರು ಅಲ್ಲಿನ ಅನಧಿಕೃತ ಸಾಕರ್ ಗೀತೆ ಸೇಲಿಟೊ ಲಿಂಡೋ ಅಥವಾ ಪ್ರೆಟ್ಟಿ ಲಿಟ್ಲ್‌ ಸ್ಕೈ ಎಂಬ ಪ್ರಸಿದ್ಧ ಜಾನಪದ ಗೀತೆಗೆ ಮೆಕ್ಸಿಕೋದ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ.

ರಷ್ಯಾದ ಮಾಸ್ಕೋದಲ್ಲಿನ ಪಂದ್ಯದಲ್ಲಿ ಮೆಕ್ಸಿಕೋ ಜರ್ಮನಿಯನ್ನು 1-0 ಅಂತರದಿಂದ ಸೋಲಿಸಿದೆ. ಗೋಲು ಬಾರಿಸುತ್ತಲೇ ಜನತೆ ಏಕಕಾಲಕ್ಕೆ ಕುಣಿದು ಕುಪ್ಪಳಿಸಿದ್ದು ಭಾರಿ ಸದ್ದು ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ