ಲೆವೆರ್‌ಕುಸೆನ್, ಜರ್ಮನಿ: ಟಿಮೊ ವೆರ್ನರ್ ಹಾಗೂ ಓಮರ್ ಹವ್‌ಸವಿ ಗಳಿಸಿದ ಗೊಲುಗಳ ನೆರವಿ ನಿಂದ ಹಾಲಿ ಚಾಂಪಿಯನ್ ಜರ್ಮನಿ ತಂಡವು ಅಭ್ಯಾಸ ಪಂದ್ಯದಲ್ಲಿ ಗೆದ್ದಿದೆ.
ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಸೌದಿ ಅರೇಬಿಯಾ ತಂಡವನ್ನು ಜರ್ಮನಿಯು 2–1 ಗೋಲುಗಳಿಂದ ಮಣಿಸಿತು. ಈ ಮೂಲಕ ಸತತ ಐದು ಪಂದ್ಯಗಳ ಸೋಲಿನ ಸರಮಾಲೆಯಿಂದ ಹೊರಬಂದಿದೆ.
ಪಂದ್ಯದ ಆರಂಭದಿಂದಲೂ ಜರ್ಮ ನಿಯ ರಕ್ಷಣಾ ಹಾಗೂ ಮಿಡ್‌ಫೀಲ್ಡಿಂಗ್ ವಿಭಾಗದ ಆಟಗಾರರು ಯೋಜನಾಬದ್ಧವಾಗಿ ಆಟ ಆರಂಭಿಸಿದರು. ಎಂಟನೇ ನಿಮಿಷದಲ್ಲೇ ಟಿಮೊ ವೆರ್ನರ್ ಅವರು ಚೆಂಡನ್ನು ಗುರಿ ಮುಟ್ಟಿಸಿದರು. ನಂತರ ಲಾಂಗ್ ಹಾಗೂ ಶಾರ್ಟ್ ಪಾಸಿಂಗ್ ಮೂಲಕ ಗಮನಸೆಳೆದ ಅವರು ಅನೇಕ ಬಾರಿ ಎದುರಾಳಿ ಆಟಗಾರರ ಮೇಲೆ ಒತ್ತಡ ಹೆಚ್ಚಿಸಿದರು.
44ನೇ ನಿಮಿಷದಲ್ಲಿ ಓಮರ್ ಹವ್‌ಸವಿ ಅವರು ಮತ್ತೊಂದು ಗೊಲು ದಾಖಲಿಸಿ ತಂಡದ ಮುನ್ನಡೆ ಹೆಚ್ಚಿಸಿದರು. ಪಂದ್ಯದ ದ್ವಿತಿಯಾರ್ಧದಲ್ಲಿ ಬಿರುಸಿನ ಆಟಕ್ಕಿಳಿದ ಸೌದಿ ಅರೇಬಿಯಾದ ಆಟಗಾರರು ಗೊಲು ಗಳಿಸುವಲ್ಲಿ ವಿಫಲವಾದರು. 84ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡ ಅಲ್ ಜಸ್ಸಾಮ್ ಅವರು ಗೋಲು ಗಳಿಸಿ ಮುನ್ನಡೆಯನ್ನು ತಗ್ಗಿಸಿದರು. ಆದರೆ, ಕೊನೆಯ ನಿಮಿಷಗಳಲ್ಲಿ ಮತ್ತೆ ಸಂಘಟಿತ ಹೋರಾಟದಿಂದ ಜರ್ಮನಿ ಜಯ ಗಳಿಸಿತು.
ಪಂದ್ಯದ ನಂತರ ಮಾತನಾಡಿದ ಜರ್ಮನಿಯ ಮುಂಚೂಣಿ ವಿಭಾಗದ ಆಟಗಾರ ಮಾರ್ಕೊ ರುಸ್, ‘ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಈ ಜಯವು ಸಂತಸ ತಂದಿದೆ. ಆದರೆ, ಈ ಪಂದ್ಯದಲ್ಲೂ ಹಲವು ತಪ್ಪುಗಳನ್ನು ನಾವು ಮಾಡಿದ್ದೇವೆ. ಮುಂದಿನ ಪಂದ್ಯದಲ್ಲಿ ಆ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಬೇಕಿದೆ’ ಎಂದು ಹೇಳಿದ್ದಾರೆ.
ಸೌದಿ ಅರೇಬಿಯಾ ಹಾಗೂ ಜರ್ಮನಿ ತಂಡಗಳು ಕ್ರಮವಾಗಿ ಎ ಹಾಗೂ ಎಫ್ ಗುಂಪುಗಳಲ್ಲಿವೆ. ಜೂನ್ 14ರಂದು ನಡೆಯುವ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ತಂಡವು ರಷ್ಯಾ ವಿರುದ್ಧ ಸೆಣಸಲಿದೆ.