ಲಿಪಿಯ ಸಂಕ್ರಮಣಕ್ಕೆ ಕದಂಬರ ಕೊಡುಗೆ

 

ಅಶೋಕನ ಕಾಲಾನಂತರದ ಭಾಷೆ ಮತ್ತು ಲಿಪಿಯ ಸಂಕ್ರಮಣವನ್ನು ಗಮನಿಸುತ್ತಾ ಬಂದಂತೆ ಹಿರೇ ಹಡಗಲಿಯ ತಾಮ್ರಪಟದ ಕುರಿತಾಗಿ ಮೊನ್ನೆಯಷ್ಟೇ ಬರೆದಿದ್ದೆ. ಪಲ್ಲವ ಶಿವಸ್ಕಂದವರ್ಮ ಬೇರೆ ಕಡೆಯಿಂದ ಕರೆಸಿಕೊಂಡ ಲಿಪಿಕಾರರು ಮತ್ತು ಶಿಲ್ಪಿಗಳು ಕನ್ನಡದ ನಾಡಲ್ಲಿ ಹೇಗೆ ತಮ್ಮ ನೆಲೆ ಕಂದುಕೊಂಡರು ಎನ್ನುವುದು ಗಮನಿಸಿದೆ. ಆದರೆ ಆ ತನಕದ ಯಾವುದೇ ಶಾಸನಗಳಲ್ಲೂ ಲಿಪಿಕಾರರ ಕುರಿತಾದ ಸ್ಪಷ್ಟತೆ ನಮಗೆ ದೊರಕಲಾರದು. ಆದರೆ ಕರ್ನಾಟಕದಲ್ಲಿ ತಮ್ಮದೇ ವಂಶವೊಂದರೆ ಸ್ಥಾಪನೆಗೆ ಕಾರಣರಾದ ಕದಂಬರ ಕಾಲದಲ್ಲಿ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ ಮಳವಳ್ಳಿಯ ಕಲ್ಲೇಶ್ವರ ದೇವಾಲಯದಲ್ಲಿ ಒಂದು ಸ್ತಂಭ ಶಾಸನವನ್ನು ಬರೆಸುತ್ತಾನೆ. ಇದು ೨೫೦ರ ಸುಮಾರಿಗೆ ಬರೆಸಿದ ತರುವಾಯ ೫೦ ವರ್ಷಗಳ ನಂತರ ಈ ದೇವಾಲಯ ಜೀರ್ಣೋದ್ಧಾರ ಮಾಡಿಸಿರುವುದಾಗಿ ಕದಂಬ ಶಿವಸ್ಕಂದ ವರ್ಮ ಬರೆಸುತ್ತಾನೆ ಒಂದೇ ಸ್ತಂಭದಲ್ಲಿ ಇಬ್ಬರ ಶಾಸನ ಕಾಣಿಸಿಕೊಂಡಿದೆ. ಇದೊಂದು ಅತ್ಯಪೂರ್ವ ಶಾಸನವಾಗಿ ನನಗೆ ಕಾಣಿಸಿಕೊಳ್ಳುತ್ತದೆ. ಈ ಶಾಸನದ ಮಹತ್ವ ಗಮನಿಸಿದರೆ ತಿಳಿಯುತ್ತದೆ. ಶಾಸನದ ನಾಲ್ಕನೇ ಸಾಲಿನಲ್ಲಿ “ಉಕ್ತಂ ಖಂಡೋ ವಿಶ್ವಕಮ್ಮಾ” ಎನ್ನುವ ಪದ ಬರೆದು ವಿಶ್ವಕರ್ಮನ ಉಲ್ಲೇಖ ಕೊಡುತ್ತಾನೆ. ಈ ಮೊದಲೆಲ್ಲೂ ಕಾಣಿಸದ ವಿಶ್ವಕರ್ಮನ ಉಲ್ಲೇಖ ಇದರಲ್ಲಿ ಕಾಣಸಿಗುತ್ತದೆ. ಹೇಳಿರುವುದನ್ನು ಕಂಡರಿಸಿದವನು ವಿಶ್ವಕರ್ಮನು ಎನ್ನುತ್ತಾನೆ. ಇದೇ ಶಾಸನದ ಐದನೇ ಸಾಲಿನಲ್ಲಿ ‘ಬ್ರಹ್ಮಂ ದೆಜ್ಜಂ ಸೆ ಋಧಮಾತೇ’ ಎನ್ನುವುದಾಗಿ ಬರೆದು ಅಲ್ಲಿ ಋಕಾರದ ಪರಿಚಯ ಮಾಡಿಕೊಡುತ್ತಾನೆ. ಈ ಋಕಾರ ಮುಂದೆ ಚಾಲುಕ್ಯರ ಕಾಲದಲ್ಲೆಲ್ಲೂ ಕಾಣಸಿಗುವುದಿಲ್ಲ. ಮಳವಳ್ಳಿಯ ಈ ಶಾಸನದಿಂದ ವಿಶ್ವಕರ್ಮರ ಉಲ್ಲೇಖ ಸಿಗುವುದರಿಂದ ಕನ್ನಡದ ನೆಲದಲ್ಲಿ ವಿಶ್ವಕರ್ಮರ ಉಲ್ಲೇಖ ಸಿಗುವ ಅತಿ ಪ್ರಾಚೀನ ಶಾಸನ ಎನ್ನಿಸಿದೆ. ಈ ಮಳವಳ್ಳಿ ಶಾಸನ ಬಂದ ಸುಮಾರು ಐದುನೂರು ವರ್ಷಗಳ ನಂತರದ ಕದಂಬರ ಶಾಸನಗಳಲ್ಲಿ ವಿಶ್ವಕರ್ಮರು ಹೆಚ್ಚು ಬಂದು ಅದಕ್ಕೂ ಮೊದಲಿಗೆ ಇದ್ದಂತಹ ನವಕರ್ಮಿಗಳು ಅಪರೂಪವಾಗತೊಡಗುವರು. ಮಳವಳ್ಳೀ ಶಾಸನದ ಕೊನೆಗೆ “ಚಾತುವೆಜ್ಜಂ ಸಿದ್ಧಿತಂ ನಿಗಮ ವಿದಿತಂ ಚ ಏವಂ ರಾಜಾ ಆಣಪಯತಿ ನಾಗದತ್ತೇನ ಅಪ್ಪಕತೇ ಉಚಿತ ಸೈಲೇ” ಎಂದು ಲಿಪಿಕಾರ ಕೌಶಿಕನ ಪುತ್ರ ಕೊಂಡಮಾನಕುಲದ ನಾಗದತ್ತನ ಹೆಸರಿದೆ.ಇವನು ಈ ಶಾಸನದಲ್ಲಿ ವಿವರಿಸಿರುವ ದತ್ತಿಯ ಭೋಗಿಯೂ ಆಗಿದ್ದಾನೆ.
ಶಾತವಾಹನರ ನಂತರ ಕ್ರಿ.ಶ. ಮೂರನೇ ಶತಮಾನದಲ್ಲಿ ಬನವಾಸಿ ಆಳಿದ ಚುಟುಸಾತಕರ್ಣಿಗಳು ಪ್ರಾಕೃತ ಮತ್ತು ಬ್ರಾಹ್ಮಿಯ ಮತ್ತು ಶಿಲಾ ಮಾಧ್ಯಮವನ್ನು ಮುಂದುವರೆಸಿದರೆಂಬುದಕ್ಕೆ ಬನವಾಸಿಯ ನಾಗಶಿಲ್ಪದ ಮೇಲಿನ ನಿಮ್ಹಕಡಸಾತಕಣ್ಣಿಯ ಶಾಸನ ಉದಾಹರಣೆಯಾಗಿ ಸಿಗುತ್ತದೆ. ‘(ಇ)ದ ಮೊರಕನ (ಇಂದ್ರ ಮಯೂರನ) ಶಿಷ್ಯನೂ ಆಚಾರ್ಯ ಜಯಂತಕನ ಪುತ್ರನೂ ಆದ ’ಣಟಕ’(ನರ್ತಕ)ನು’ ಮಾಡಿದ(‘ಕತೊ’)ನೆಂದು ಈ ನಾಗ ಶಿಲ್ಪದ ಫಲಕದಂಚಿನಲ್ಲಿ ಕೆತ್ತಿರುವ ಶಾಸನದಿಂದ ತಿಳಿದು ಬರುತ್ತದೆ. ಶಿಲ್ಪಿಯೊಬ್ಬನು ತನ್ನನ್ನು ‘ಆಚಾರ್ಯ’ ಎಂದು ಕರೆದು ಕೊಂಡಿರುವುದು ಇದೇ ಮೊದಲು. ಇವರು ‘ಸಜಯತ’ ಅಂದರೆ ಸಂಜಯಂತೀ ಅಂದರೆ ವೈಜಯಂತೀ = ಬನವಾಸಿ ನಗರದ ಕಲಾಕಾರರಾಗಿದ್ದರು.
ಕರ್ನಾಟಕದಲ್ಲಿ ’ಋ’ ಸ್ವರಾಕ್ಷರವನ್ನು ಬಳಸಿ ಬರೆದಿರುವುದು ಸು. ೩-೪ನೇ ಶತಮಾನದ ಶಿವಮೊಗ್ಗ ಜಿಲ್ಲೆಯ ಮಳವಳ್ಳಿ ಪ್ರಾಕೃತ ಶಾಸನದಲ್ಲಿ ಇಲ್ಲಿ ಕದಮ್ಬೇಸು ಋಧಮಾತೇ ವಿವಸತ್ತು ಚಾತುವೆಜ್ಜಂ… ಈ ಅಕ್ಷರವು ಕನ್ನಡ ಮುಂದೆ ಬರವಣಿಗೆಯನ್ನು ಇದಾದ ನಂತರ ಸೀರಿಕೊಂಡಿರಬಹುದು ಆದರೆ ಇದಕ್ಕೆ ಸ್ಪಷ್ಟ ಆಧಾರ ಮೊದಲು ದೊರೆಯುವುದು ಶ್ರವಣಬೆಳ್ಗೊಳ ಚಿಕ್ಕಬೆಟ್ಟದ ‘ಶ್ರೀ ಋಷಭಸೇನ ಗುರುವಡಿಗಳ’ ಎಂದು ಬರುವ ಶಾಸನವೊಂದರಲ್ಲಿ (Sb 34)
ಈ ಕಾಲದ ಸಂಸ್ಕೃತವು ವ್ಯವಹಾರ ಭಾಷೆಯಾಗಿ ಮಾತ್ರ ಉಳಿಯದೆ ಸಾಹಿತ್ಯಗುಣವನ್ನು ಸಂಪಾದಿಸಿಕೊಂಡ ಕಾವ್ಯ ಮಾಧ್ಯಮವಾಯಿತು. ಇದರ ಮೊದಲ ಹೆಜ್ಜೆಯ ಗುರುತು ಶಿವಮೊಗ್ಗ ಜಿಲ್ಲೆಯ ಸೊರಬದ ತಾಳಗುಂದದ ಪ್ರಣವೇಶ್ವರ ದೇವಸ್ಥಾನದ ಸ್ತಂಭಶಾಸನದಲ್ಲಿದೆ. ಕವಿ ಕುಬ್ಜ ಇದರ ಕರ್ತೃ. ’ಕುಬ್ಜಸ್ಸ್ವ ಕಾವ್ಯಮಿದಮಶ್ಮತಲೇ ಲಿಲೇಖ’ ಎಂದು ಅವನೇ ಈ ಶಾಸನದಲ್ಲಿ ಹೇಳಿ ಕೊಂಡಿರುವನು. ಆರಂಭ ಕಾಲದ ಕದಂಬರ ಅತಿ ದೀರ್ಘ ದಾಖಲೆಯಾದ ಇದು ಒಟ್ಟು ೩೪ ಸಂಸ್ಕೃತ ಪದ್ಯಗಳನ್ನೊಳಗೊಂಡಿದೆ. ಸುಂದರ ಅಕ್ಷರಗಳಲ್ಲಿ ಸಮಸಾಲುಗಳಲ್ಲಿ ಕಂಡರಿಸಿರುವ ಈ ಕಂಭಶಾಸನದಲ್ಲಿ ಅಕ್ಷರದೋಷಗಳು ಇಲ್ಲವೇ ಇಲ್ಲ ಅನ್ನಬಹುದು.
ಈ ಕಾವ್ಯವನ್ನು ಹೆಣೆಯಲು ಕುಬ್ಜನು ಒಟ್ಟು ಒಂಬತ್ತು ಜಾತಿ ಛಂದಸ್ಸುಗಳನ್ನು ಬಳಸಿರುವನು. ಇವುಗಳಲ್ಲಿ ಪುಷ್ಟಿತಾಗ್ರಾ, ಇಂದ್ರವಜ್ರ, ವಸಂತತಿಲಕ, ಮಂದಾಕ್ರಾಂತಾ, ಶಾರ್ದೂಲವಿಕ್ರೀಡಿತ ಮತ್ತು ದಂಡಕ ಶಾಖೆಯ ’ಪ್ರಚಿತ’ವೆಂಬವು ಈ ಕಾಲಕ್ಕಾಗಲೇ ಪರಿಚಿತವಾಗಿದ್ದವು. ಆದರೆ ಸುಮಾರು 24 ಪದ್ಯಗಳನ್ನು ಸಂಯೋಜಿಸಲು ಬಳಸಿರುವ ’ಮಾತ್ರಾಸಮಕ’ದ ’ಮಿಶ್ರಗೀತಿಕಾ’ ಛಂದಸ್ಸು ಹೊಸದೆಂಬುದು ಹಲವಿ ವಿದ್ವಜ್ಜನರ ಅಭಿಮತ. ಸರಳ ಗದ್ಯದಂತೆ ಓದಿಸಿಕೊಳ್ಳುವ, ಹದಿನೈದು ಮಾತ್ರಾಪಾದದ ನಾಲ್ಕು ಸಾಲುಗಳ ಈ ಕಾವ್ಯಪ್ರಭೇದವನ್ನು ಕೆಲವು ಪಂಡಿತರು ಗದ್ಯವೆಂದೇ ಭ್ರಮಿಸಿದ್ದುಂಟು. ಇದಕ್ಕೆ ಅಪವಾದವಾಗಿ ಇದನ್ನು ಗುಪ್ತರು ತಮ್ಮ ತುಸಾನ್ ಶಿಲಾಶಾಸನದಲ್ಲಿ, ವಾಕಾಟಕರು ಅಜಂತಾ ಗುಹಾಶಾಸನದಲ್ಲಿ ಬಳಸಿರುವುದನ್ನು ನೋಡಬಹುದು. ಎಲ್ಲೋ ಬಳಕೆಯಲ್ಲಿದ್ದ ಈ ಛಂದಸ್ಸನ್ನು ಕುಬ್ಜನು ಕರ್ನಾಟಕಕ್ಕೆ ಪರಿಚಯಿಸಿದ್ದು ನಮ್ಮ ಪಾಲಿಗೆ ದೊಡ್ದ ಕೊಡುಗೆ ಅನ್ನಿಸುತ್ತದೆ.
ಕವಿಕುಬ್ಜನ ಬಗ್ಗೆ ಮತ್ತು ಆತನ ಶಸನದ ಕುರಿತು ದೀರ್ಘವಾದ ಲೇಖನ ಒಂದನ್ನು ಬರೆದಿದ್ದೇನೆ ಅದನ್ನು ಮುಂದೆ ಹಾಕುತ್ತೇನೆ. ಎರದನೇ ಪೊಲೆಕೇಶಿಯ ರವಿಕೀರ್ತಿಗಿಂತ ಪೂರ್ವದವನೆನ್ನುವುದು ನಿರ್ವಿವಾದ
ಸೃಜನಾತ್ಮಕ ಕವಿ ಕುಬ್ಜನು ತನ್ನ ದೊರೆಯ ಇಚ್ಛೆಯ ಮೇರೆಗೆ ಈ ಪ್ರಶಸ್ತಿಯನ್ನು ರಚಿಸುವಾಗ ತನ್ನ ಸ್ವಾತಂತ್ರ್ಯವನ್ನು ಯಥೇಚ್ಚವಾಗಿ ಬಳಸಿಕೊಂಡಿದ್ದಾನೆ. ಕುಬ್ಜನ ನಂತರದ ಕದಂಬರ ಕಾಲದ ಶಾಸನ ಕವಿಗಳಾರೂ ಅವನಷ್ಟು ಬಗೆಯ ಛಂದಸ್ಸುಗಳನ್ನು ಬಳಸಿ ಶಾಸನಗಳನ್ನು ರಚಿಸಲಿಲ್ಲ. ಅಲ್ಲದೆ ಇವನಷ್ಟು ಸುದೀರ್ಘ ಶಾಸನಕಾವ್ಯವನ್ನೂ ಬರೆಯಲಿಲ್ಲ. ಸುಮಾರು ಇಪ್ಪತ್ತೇಳು ಶಾಸನ ಕವಿಗಳು ಅನುಷ್ಟುಪ್ ಛಂದಸ್ಸೊಂದನ್ನೇ ಬಳಸಿದ್ದಾರೆ, ಆರು ಕವಿಗಳು ಆರ್ಯ, ಸ್ರಗ್ಧರಾ, ಉಪಜಾತಿ, ಮುಂತಾದವನ್ನು ಅನುಷ್ಟುಪ್ ಜೊತೆ ಸೇರಿಸಿ ಬರೆದರು. ಇದೇನೇ ಇರಲಿ ರವಿವರ್ಮನ ಕಾಲದ ದಾವಣಗೆರೆ, ಹಲಸಿ, ಗುಡ್ನಾಪುರ ಶಾಸನಗಳು ಪ್ರೌಢಕಾವ್ಯಗುಣವನ್ನು ಹೊಂದಿವೆ. ಹಲಸಿಯ ಎರಡನೆಯ ಜಿನಶಾಸನದಲ್ಲಿರುವ ಎಂಟು ಛಂದೋಜಾತಿಗಳು ಮತ್ತು ಗುಡ್ನಾಪುರದ ಶಾಸನದಲ್ಲಿ ಪುನರುಕ್ತಿಯಾಗಿರುವ ‘ಮಾತ್ರಾಸಮಕ’ ಛಂದಸ್ಸು ಕುಬ್ಜನ ಅನುಕರಣೆಯಂತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ