ಉಕ್ತಂ ಖಣ್ಡೋ ವಿಶ್ವಕಮ್ಮಾ

(Written By : SADYOJATA BHAT)

ಮೌರ್ಯರ ನಂತರ ಕರ್ನಾಟಕದಲ್ಲಿ ಸಾತವಾಹನರು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ಕೆಲವು ಸಮಯ ಆಳಿದರು. ಈಗಿನ ಬಳ್ಳಾರಿ ಜಿಲ್ಲೆಯ ಮ್ಯಾಕಡೋನಿಯಲ್ಲಿ ಈ ಅರಸು ಮನೆತನದ ಕೊನೆಯ ಅರಸ ನಾಲ್ಕನೆ ಪುಲುಮಾವಿಯ ಎಂಟನೆ ವರ್ಷದ ಶಾಸನವಿದೆ. ಈತನು ಕ್ರಿ. ಶ. ೨೨೪ರ ತನಕ ಆಳಿದ ಬಗ್ಗೆ ದಾಖಲೆಗಳು ತಿಳಿಸುತ್ತವೆ ಆಮೇಲೆ ಚುಟುಗಳು ಆಡಳಿತ ನಡೆಸುತ್ತಾರೆ. ಲಿಪಿಯ ಲೋಕಕ್ಕೆ ಚುಟುಗಳಿನ್ನೂ ಪ್ರಾಕೃತ ಬ್ರಾಹ್ಮಿಯನ್ನೇ ಅವಲಂಬಿಸಿರುವುದು ಬನವಾಸಿಯ ನಾಗಶಿಲ್ಪದಿಂದ ತಿಳಿದು ಬರುತ್ತದೆ.
ಶಿವಮೊಗ್ಗ ಜಿಲ್ಲೆಯ ಜಿಲ್ಲೆಯ ಶಿಖಾರಿಪುರ ತಾಲೂಕಿನ ಮಳವಳ್ಳಿಯ ಕದಂಬರಾಜನ ಶಾಸನದಲ್ಲಿ ಉಕ್ತಂ ಖಣ್ಡೋ ವಿಶ್ವಕಮ್ಮಾ ಎನ್ನುವ ಮಾತಿನಿಂದ ವಿಶ್ವಕರ್ಮ್ಮರ ಉಲ್ಲೇಖವೇನೋ ಸಿಕ್ಕಿದರೂ ಸಹ ಇವರು ಭಾಷೆ ಬಲ್ಲವರೆಂದೋ ಅಥವಾ ಲಿಪಿಗಳನ್ನು ಬಲ್ಲವರು ಎನ್ನುವುದು ತಿಳಿಯುತ್ತಿಲ್ಲ. ರಾಜನಿಂದ ನಿರ್ದೇಶಿತವಾದ ವಿಷಯಗಳನ್ನು ಶಾಸನಕಾರರಿಂದ ಹೇಳಿಸಿಕೊಂಡು ಅದನ್ನು ಕಡೆದಾತನ ಹೆಸರು ವಿಶ್ವಕಮ್ಮ ಎನ್ನುವುದು ಸಾಬೀತಾಗುತ್ತದೆ. ಮುಂದೆ ಕದಂಬರ ಕಾಲದಲ್ಲಿ ಹಂತ ಹಂತದಲ್ಲಿ ಲಿಪಿ ವಿಕಾಸದ ಪಥದಲ್ಲಿ ಸಾಗುತ್ತದೆ.
ವಿಶ್ವಕರ್ಮನ ಮೊದಲ ಉಲ್ಲೇಖ ಸಿಗುವುದು ಶಾತವಾಹನರ ಮಳವಳ್ಳಿಯ ಪ್ರಾಕೃತ ಶಾಸನದಲ್ಲಾದರೆ, ಈ ಉಲ್ಲೇಖದ ಸರಿ ಸುಮಾರು ಮುನ್ನೂರು ವರ್ಷಗಳ ನಂತರ, ಅಂದರೆ ಸುಮಾರು ಐದನೇ ಶತಮಾನದ ಆರಂಭದಲ್ಲಿ, ಗಂಗರ ದೊರೆ ಹರಿವರ್ಮನ ಸಂಸ್ಕೃತ ಭಾಷೆಯ ಟಿ. ನರಸೀಪುರ ತಾಲೂಕಿನ ಕುಡ್ಲೂರು ತಾಮ್ರಪಟ ಶಾಸನದಲ್ಲಿ ’ವಿಶ್ವಕರ್ಮ’ನ ಪ್ರಸ್ತಾಪ ಕಾಣಿಸಿಕೊಳ್ಳುತ್ತದೆ. ಈ ಉಲ್ಲೇಖ ಗಂಗರ ಕಾಲದ ಶಾಸನಗಳಲ್ಲಿ ಬರುವ ಮೊದಲ ಉಲ್ಲೇಖ. “ಋಗ್ವೇದ ಶಾಖಾ ಚಳುಕಿ ವೆಡಿಚಾನ್ವಯ ಭಾರದ್ವಾಜ ಗೋತ್ರಾಯ ದಾಮೋದರ ಭಟ್ಟಂಗೆ ಬಡಗರೆ ನಾಡು ತ್ರಿಂಶನ್ಮಧ್ಯೇ” ಅಂದರೆ ಋಗ್ವೇದ ಶಾಖೆಯ ದಾಮೋದರಭಟ್ಟನಿಗೆ ಈ ಅರಸನು ಬಡಗರೆ ನಾಡನ್ನು ದತ್ತಿಯಾಗಿ ಕೊಟ್ಟಿರುವುದನ್ನು ಸಮ್ಸ್ಕೃತ ಮತ್ತು ಕನ್ನಡವನ್ನು ಬೆರೆಸಿ ಮಿಶ್ರಭಾಷೆಯಲ್ಲಿ ಮತ್ತು ಆರಂಭಕಾಲೀನ ಕನ್ನಡದಲ್ಲಿ ಬರೆಸಿ, ’ವಿಸ್ವಕರ್ಮ್ಮಾಚಾರ್ಯ ಏಣ ಸಸನ ಲಿಖಿದಂ’ ಎಂದು ಸ್ವಲ್ಪಗಲಿಬಿಲಿಯಿಂದ ಅಸ್ಪಷ್ಟ ಪದಗಳಲ್ಲಿ ಈತನು ತನ್ನ ಶಾಸನ ಕಂಡರಣೆಯ ಕಾರ್ಯವನ್ನು ಮುಕ್ತಾಯಮಾಡಿರುವನು. ಇದೇ ಶಾಸನವನ್ನು ಒಂಬತ್ತನೇ ಶತಮಾನದಲ್ಲಿ ಪುನಃ ಶಾಸನದ ಸಂರಕ್ಷಣೆಗೋಸ್ಕರ ಪ್ರತಿಮಾಡಿರಬಹುದೆಂಬ ಶಂಕೆ ವಿದ್ವದ್ವಲಯದಲ್ಲಿ ಇದೆ, ಆದರೆ ಇದರಲ್ಲಿರುವ ವಿಷಯಗಳಂತೂ ಐದನೇ ಶತಮಾನವನ್ನೇ ಪ್ರತಿನಿಧಿಸುತ್ತಿವೆ.
ಹರಿವರ್ಮನು ಗಂಗವಂಶದ ಮೂರನೇ ರಾಜ. ಇವನು ಆಡಳಿತ ನಡೆಸಿದ ಕಾಲವನ್ನು ಕ್ರಿ.ಶ. ೪೦೦ರ ಕ್ಕೆ ಹೊಂದಿಸಬಹುದು. ಇತ್ತೀಚೆಗೆ ದೊರಕಿರುವ ಟಿ. ನರಸೀಪುರ ತಾಲೂಕಿನ ತುಂಬಲು ತಾಮ್ರಪಟದಂತೆ ಈತನು ಕ್ರಿ.ಶ. ೪೪೪ರವರೆಗೂ ರಾಜ್ಯ ಆಳಿದನು. ಕನ್ನಡ ಭಾಷೆಯಲ್ಲಿ ತಾಮ್ರಪಟಗಳನ್ನು ಬರೆಸಿದ ಮೊದಲಿಗನೆನ್ನುವ ಹೆಗ್ಗಳಿಕೆ ಹರಿವರ್ಮನಿಗೇ ಸಲ್ಲುತ್ತದೆ. ಹಲ್ಮಿಡಿ ಮೊದಲ ಕನ್ನಡ ಶಿಲಾಶಾಸನವಾದರೆ(ಈಗ ತಾಳಗುಂದದಲ್ಲಿ ದೊರೆತ ಶಿಲಾ ಶಾಸನವೇ(ಸಿಂಹ ಕಟಾಂಜನ) ಮೊದಲ ಶಿಲಾಶಾಸನವೆಂದು ಹೇಳಲಾಗುತ್ತಿದೆ), ಹರಿವರ್ಮನ ತುಂಬಲು ಮತ್ತು ಕುಡ್ಲೂರು ಶಾಸನಗಳು ಮೊದಲ ಕನ್ನಡ ತಾಮ್ರಪಟಗಳ ಸ್ಥಾನವನ್ನು ಅಲಂಕರಿಸುತ್ತವೆ. ಹಲ್ಮಿಡಿಗಿಂತ ಇಲ್ಲಿ ಹೆಚ್ಚು ಕನ್ನಡ ಪದಗಳನ್ನು ಬಳಸಿರುವುದರಿಂದ ಕ್ರಿ.ಶ. ಮೂರು – ನಾಲ್ಕನೇ ಶತಮಾನದಲ್ಲಿಯೇ ಕನ್ನಡವು ಪ್ರಬುದ್ಧ ವ್ಯವಹಾರ ಭಾಷೆ ಮತ್ತು ಲಿಪಿ ಪಡೆದಾಗಿತ್ತು. ಕುಡ್ಲೂರಿನ ವಿಶ್ವಕರ್ಮ್ಮಾಚಾರ್ಯ್ಯ ಮತ್ತು ತುಂಬಲುವಿನ ಕಮ್ಮರ ಕೊಂಗುಣಿಯಾಚಾರಿ ಕನ್ನಡದ ಮೊದಲ ಲಿಪಿಕಾರರು ಎನ್ನ ಬಹುದು. ಸುಮಾರು ಎಂಟನೇ ಶತಮಾನದ ಹೊತ್ತಿಗೆ ಗಂಗರ ಶಾಸನಗಳಲ್ಲಿ ವಿಶ್ವಕರ್ಮರು ಸತತವಾಗಿ ಕಾಣಿಸಿಕೊಳ್ಳೂತ್ತಾರೆ. ಮಂಡ್ಯ ಜಿಲ್ಲೆಯ ಹಳ್ಳೇಗೆರೆಯ ಶಾಸನ ಗಂಗ ಶಿವಮಾರನದು. ತಳವನಪುರದಲ್ಲಿದ್ದಾಗ ಕಿೞನಿ ಎನ್ನುವ ನದಿಗೆ ಸೇತುವೆಯನ್ನು ಕಟ್ಟಿಸಿ, ಅದರ ಎರಡೂ ದಡಗಳ ಮೇಲೆ ನಿರ್ಮಿಸಿದ ಪಲ್ಲವತಟಾಕವೆಂಬ ಗ್ರಾಮದಲ್ಲಿ ಐವತ್ತು ಬ್ರಾಹ್ಮಣರನ್ನು ಭಕ್ತಿ ಮತ್ತು ಆದರದಿಂದ ಬರಮಾಡಿಕೊಂಡು ಅಲ್ಲಿಯೇ ನೆಲೆಸುವಂತೆ ಮಾಡಿದ ವಿವರಗಳನ್ನು ದಾಖಲಿಸಿದವನು ’ವಿಶ್ವಕರ್ಮ ಸಮಾನೇನ ವಿಶ್ವಕರ್ಮ್ಮಚಾರ್ಯ್ಯ’ನು. ಸುಮಾರು ೬೮ ಸಾಲುಗಳ ದೀರ್ಘವಾದ ಶಾಸನದ ಕೊನೆಯಲ್ಲಿ ತನ್ನನ್ನು ತಾನು ವಿಶ್ವಕರ್ಮನಿಗೆ ಸಮಾನನೆಂದಿರುವುದು ಕೂಡ್ಲೂರಿನ ವಿಶ್ವಕರ್ಮನಿಗ್ಗಿಂತಲೂ ಹೆಚ್ಚು ಪಾಂಡಿತ್ಯ ಹೊಂದಿದ್ದ ಎನ್ನುವುದು ತಿಳಿದು ಬರುತ್ತದೆ. ಈ ಶಾಸನದಲ್ಲಿ ಗದ್ಯಗೊಂದಿಗೆ ಪದ್ಯ ಬೆರೆಸಿ ಸಂಸ್ಕೃತದಲ್ಲಿ ಬರೆದಿರುವ ಈ ಪಠ್ಯದಲ್ಲಿ ಪ್ರೌಢ ಸಾಹಿತ್ಯವನ್ನು ಗಮನಿಸಬಹುದಾಗಿದೆ. ಛಂದೋಬದ್ಧವಾದ ರಚನೆಗಳಲ್ಲಿ ಹತ್ತು ಪದ್ಯಗಳನ್ನು ಸ್ರಗ್ಧರಾ, ಶಾರ್ದೂಲವಿಕ್ರೀಡಿತ, ವಸಂತತಿಲಕಾ, ಅನುಷ್ಟುಪ್ ಮತ್ತು ಶಾಲಿನೀ ಛಂದಸ್ಸುಗಳಲ್ಲಿ ರಚಿಸಿರುವನು. ಲಿಪಿದೋಷಗಳು ಕೂಡ ಎಲ್ಲೋ ಒಂದೆರಡು ಕಡೆ ಕಾಣಸಿಗುವುದು.
ಶಿವಮಾರನ ಹಳ್ಳೆಗೆರೆ ಶಾಸನದ ವಿಷಯ ಕೂಡಾ ಮಹತ್ವದ್ದಾಗಿ ಕಾಣುತ್ತದೆ, ಗಂಗರ ಕಾಲದಲ್ಲಿ ಬ್ರಹ್ಮದೇಯಗಳನ್ನು ನಿರ್ಮಾಣಮಾಡಿ ಬ್ರಹ್ಮಸ್ವಗಳನ್ನು ಹೇಗೆ ಕೊಡಲಾಗುತ್ತಿತ್ತು ಎಂಬುದರ ಮೇಲೆ ಬೆಳಕು ಚೆಲ್ಲುವುದು. ಪಲ್ಲವ ಸಾಮಂತರಿಬ್ಬರು ಸಲ್ಲಿಸಿದ ಬೇಡಿಕೆಯನ್ನು ಮನ್ನಿಸಿ, ಕೆಲವು ಗ್ರಾಮಗಳನ್ನು ಬ್ರಾಹ್ಮಣ ಸಮುದಾಯಕ್ಕೆ ಶಿವಮಾರನು ದತ್ತಿಕೊಟ್ಟ ವಿವರ ಇಲ್ಲಿದೆ. ತಮ್ಮ ಬೇಡಿಕೆಯನ್ನು ವಿನಂತಿಸುವ ಮುನ್ನ ಪಲ್ಲವರು ಕಿೞನಿ ನದಿಯ ಮೇಲೆ ಸೇತುವೆಯನ್ನು ಕಟ್ಟಿಸಿ, ಅದರ ಉತ್ತರ ಮತ್ತು ದಕ್ಷಿಣ ದಡದ ಮೇಲೆ ’ಪಲ್ಲವತಟಾಕ’ವೆಂಬ ಗ್ರಾಮವನ್ನು ನಿರ್ಮಿಸಿದ್ದರು. ಅರಸಕೊಟ್ಟ ಗ್ರಾಮವನ್ನು ಅರವತ್ತಾರು ವ್ರಿತ್ತಿಗಳಲ್ಲಿ ಹಂಚಿ, ಇದರಲ್ಲಿ ಸುಮಾರು ಮೂವತ್ತಾರು ಭಾಗವನ್ನು ಮಹಾಸೇನಪುರದ ಯಾಜ್ಞಿಕ ಮಾಧವಶರ್ಮ ಮತ್ತು ಅವನ ಪುತ್ರ ಭಾವಶರ್ಮನಿಗೆ ಮೀಸಲಿಟ್ಟು, ಉಳಿದ ಮೂವತ್ತು ವ್ರಿತ್ತಿಗಳನ್ನು ’ಶರ್ಮ’ ಮತ್ತು ’ಸೋಮಯಾಜಿ’ಗಳಿಗೆ ಹಂಚಲಾಯಿತು. ತಮ್ಮ ಪಾಲಿಗೆ ಬಂದ ಮೂವತ್ತಾರು ವ್ರಿತ್ತಿಗಳನ್ನು ಮರುವಿಂಗಡಿಸಿ ನಲವತ್ತೆರಡಕ್ಕೇರಿಸಿ, ಅದರಲ್ಲಿ ಎಂಟನ್ನು ತನ್ನ ಮಕ್ಕಳು ಮೊಮ್ಮಕ್ಕಳಿಗಿಟ್ಟುಕೊಂಡು, ಉಳಿದ ಇಪ್ಪತ್ತಾರು ವ್ರಿತ್ತಿಗಳಲ್ಲಿ ಹದಿನೆಂಟನ್ನು ಶರ್ಮ, ಸೋಮಯಾಜಿ, ಉಪಾಧ್ಯಾಯ, ಆಹಿತಾಗ್ನಿಗಳಿಗೆ ಮಾಧವಶರ್ಮನ ಹಿರಿಯ ಪುತ್ರನು ಹಂಚಿದನು. ಇದರಲ್ಲಿ ಪ್ರಧಾನ ವೈದಿಕನಿಗೆ ಎಂಟು, ಎರಡನೇ ಹಂತದ ಆರು ವೈದಿಕರಿಗೆ ಎರಡೆರಡು, ಮೂರನೇ ಹಂತದ ನಾಲ್ವರಿಗೆ ಒಂದೂವರೆ, ಮತ್ತು ಕೊನೆಯವರಿಗೆ ಒಂದೊಂದು ವ್ರಿತ್ತಿ ಸಂದವು. ‘ವ್ರಿತ್ತಿ’ ಎಂದರೆ ಭೂಮಿಯ ಗಡಿ ಅಥವಾ ಹಿಡುವಳಿ; ಭೂಮಿಯಲ್ಲಿ ಬೆಳೆದ ಉತ್ಪನ್ನದ ಭಾಗವೂ ಆಗಬಹುದು.
ಎಂಟನೇ ಶತಮಾನದಾರಂಭದ ಈ ತಾಮ್ರಪಟವು ಮುಂದಿನ ಶಾಸನಕವಿಗಳಿಗೊಂದು ಮಾದರಿಯಾಯಿತೆನಿಸುವುದು. ಇದೇ ಶತಮಾನದ ಉತ್ತರಾರ್ಧದಲ್ಲಿ ಹಲವು ತಾಮ್ರಪಟಗಳನ್ನು ಬರೆದ ಇನ್ನೊಬ್ಬ ವಿಶ್ವಕರ್ಮ್ಮಾಚಾರ್ಯ್ಯನಲ್ಲಿ ಇದರ ಪ್ರಭಾವವನ್ನು ಗುರುತಿಸಬಹುದಾಗಿದೆ.
ಕರ್ನಾಟಕದಲ್ಲಿ ಆಗಿಹೋದ ವಿಶ್ವಕರ್ಮರ ಉಲ್ಲೇಖ ಇನ್ನೂ ಕೊಡಬಹುದು ದೀರ್ಘವಾಗುವುದು ಬೇಡ. ಇದು ೮ನೇ ಶತಮಾನಕ್ಕೆ ನಿಲ್ಲಿಸಿದ್ದೇನೆ.
#ಶಿಲೆಯಲ್ಲಡಗಿದ ಸತ್ಯ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ