ಲೈಟ್ ಆಫ್ ಏಷ್ಯಾ ಎಂಬ ಖ್ಯಾತಿಗೆ ಒಳಗಾಗಿದ್ದ ಕೊಠಾರಿ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತಲೈಟ್ ಆಫ್ ಏಷ್ಯಾ ಎಂಬ ಖ್ಯಾತಿಗೆ ಒಳಗಾಗಿದ್ದ ಇಲ್ಲಿನ ಕೊಠಾರಿ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ

ಮುಂಬೈ, ಜೂ.9-ಲೈಟ್ ಆಫ್ ಏಷ್ಯಾ ಎಂಬ ಖ್ಯಾತಿಗೆ ಒಳಗಾಗಿದ್ದ ಇಲ್ಲಿನ ಕೊಠಾರಿ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗದಿದ್ದರೂ ಅಗ್ನಿ ನಂದಿಸಲು ಶ್ರಮಿಸುತ್ತಿದ್ದ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಜನನಿಬಿಡ ಪ್ರದೇಶದಲ್ಲಿರುವ ಕೊಠಾರಿ ಕಟ್ಟಡದ 5ನೆ ಮಹಡಿಯಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕಾಣಿಸಿಕೊಂಡ ಆಕಸ್ಮಿಕ ಅಗ್ನಿ ಕ್ಷಣಮಾತ್ರದಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಿತು.
ಘಟನಾ ಸ್ಥಳಕ್ಕೆ ಆಗಮಿಸಿದ 16 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಅಗ್ನಿ ನಂದಿಸುವ ಸಂದರ್ಭದಲ್ಲಿ ಕಟ್ಟಡದ ಒಂದು ಭಾಗ ಏಕಾಏಕಿ ಕುಸಿದುಬಿದ್ದ ಹಿನ್ನೆಲೆಯಲ್ಲಿ ಇಬ್ಬರು ಅಗ್ನಿ ಶಾಮಕ ದಳದ ಸಿಬ್ಬಂದಿ ತೀವ್ರವಾಗಿ ಗಾಯಗೊಂಡರು. ತಕ್ಷಣ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಬೆಂಕಿ ಕಾಣಿಸಿಕೊಂಡ 5ನೆ ಮಹಡಿಯಲ್ಲಿದ್ದ ಕೊಠಡಿ ಕಳೆದ ಐದು ವರ್ಷಗಳಿಂದ ಖಾಲಿ ಬಿದ್ದಿತ್ತು. ಆದರೆ, ಬೆಂಕಿ ಅವಘಡಕ್ಕೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
ಬೆಂಕಿ ಅನಾಹುತ ಕಾಣಿಸಿಕೊಂಡ ಪುರಾತನ ಕಟ್ಟಡದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.
ದೇಶದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಮುಂಬೈ ಮಹಾನಗರದಲ್ಲಿ ಪದೇ ಪದೇ ಅಗ್ನಿ ಅನಾಹುತಗಳು ಸಂಭವಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ಹಿಂದೆ ಸಂಭವಿಸಿದ ಹಲವಾರು ಅಗ್ನಿ ಅನಾಹುತಗಳಲ್ಲಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ