![1046061695](http://kannada.vartamitra.com/wp-content/uploads/2018/06/1046061695-678x367.jpg)
ನ್ಯೂಯಾರ್ಕ್, ಜೂ.9-ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಭಾರತ ಅತ್ಯಂತ ಪ್ರಭಾವ ಬೀರುತ್ತಿರುವ ರಾಷ್ಟ್ರವಾಗಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗಟ್ಟರ್ಸ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಭಾರತದ ನಾಯಕತ್ವ ವಹಿಸಿರುವವರು ಸೂಕ್ತವಾಗಿ ಸ್ಪಂದಿಸುತ್ತಿರುವುದರಿಂದ ಭಾರತ ಪ್ರಭಾವಿ ದೇಶವಾಗಿ ಹೊರಹೊಮ್ಮಿದೆ ಎಂದು ಆಂಟೋನಿಯೊ ಕೊಂಡಾಡಿದ್ದಾರೆ.
ಭಾರತ-ವಿಶ್ವಸಂಸ್ಥೆ ಅಭಿವೃದ್ಧಿ ಸಹಭಾಗಿತ್ವ ನಿಧಿಯ ಮೊದಲನೆ ವಾರ್ಷಿಕೋತ್ಸವ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ತಮ್ಮ ಗುರಿ ಸಾಧಿಸಲು ಭಾರತ ನೀಡುತ್ತಿರುವ ಸಹಕಾರವನ್ನು ಎಂದಿಗೂ ಮರೆಯಲಾಗದು ಎಂದಿದ್ದಾರೆ.
ಭಾರತ ನೀಡುತ್ತಿರುವ ಸಹಕಾರದಿಂದ ನಾನು ಆ ದೇಶಕ್ಕೆ ಪ್ರವಾಸ ಕೈಗೊಂಡು ಅಲ್ಲಿನ ಸರ್ಕಾರವನ್ನು ಅಭಿನಂದಿಸಲು ಉತ್ಸುಕನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಹಭಾಗಿತ್ವ ರಾಷ್ಟ್ರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಗುರಿ ಸಾಧಿಸುವ ಉದ್ದೇಶದಿಂದ ಕಳೆದ ವರ್ಷ ಇಂಡೋ-ವಿಶ್ವಸಂಸ್ಥೆ ಸಹಭಾಗಿತ್ವದಲ್ಲಿ ನಿಧಿ ಸ್ಥಾಪಿಸಲಾಗಿದ್ದು, ಈ ಯೋಜನೆಯಡಿ ಸಂಬಂಧಪಟ್ಟ ರಾಷ್ಟ್ರಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.