ರಾಜ್ಯ ಔಷಧಿ ಮಾರಾಟ ಪ್ರತಿನಿಧಿಗಳ ಒಕ್ಕೂಟದಿಂದ ಜೂ 11ರಂದು ಬೆಂಗಳೂರು ಚಲೋ

 

ಬೆಂಗಳೂರು,ಜೂ.9- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಔಷಧಿ ಮಾರಾಟ ಪ್ರತಿನಿಧಿಗಳ ಒಕ್ಕೂಟ ಇದೇ 11ರಂದು ಬೆಂಗಳೂರು ಚಲೋ ಹಮ್ಮಿಕೊಂಡಿರುವುದಾಗಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸಿಕ ಕನಿಷ್ಠ 18 ಸಾವಿರ ವೇತನ ಹಾಗೂ 8 ಗಂಟೆ ಕಾಲ ಕಾರ್ಯ ನಿರ್ವಹಣೆ ಮೇಲೆ ಹೇರಿರುವ ತಡೆಯಾಜ್ಞೆ ತೆರವು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗುವುದು ಎಂದರು.

ಅಂದು ನಡೆಯುವ ಪ್ರತಿಭಟನೆಯಲ್ಲಿ ರಾಜ್ಯಾದ್ಯಂತ ಔಷಧಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 9 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಅಂದು ಬೆಳಗ್ಗೆ 10.30ಕ್ಕೆ ನಗರದ ಟೌನ್‍ಹಾಲ್‍ನಿಂದ ಮೆರವಣಿಗೆ ಹೊರಟು ಫ್ರೀಡಂಪಾರ್ಕ್‍ನಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿ ಕಾರ್ಮಿಕ ಸಚಿವಾಲಯಕ್ಕೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕಾ ವಿವಾದ ಇತ್ಯರ್ಥ ಕಾಯ್ದೆಗೆ ಅನುಗುಣವಾಗಿ ಕುಂದುಕೊರತೆ ನಿವಾರಿಸುವ ಸಮಿತಿಯನ್ನು ರಚಿಸುವಂತೆ ಆದೇಶಿಸಬೇಕು, ಕೆಲಸದ ನಿಯಮಾವಳಿಗಳನ್ನು ಶಾಸನಬದ್ಧವಾಗಿ ರೂಪಿಸಬೇಕು, ಕೈಗಾರಿಕಾ ವಿವಾದ ಇತ್ಯರ್ಥ ಕಾಯ್ದೆ-2(ಎಸ್) ವಿಭಾಗದ ನಿಯಮವನ್ನು ತಿದ್ದುಪಡಿ ಮಾಡಬೇಕು ಹಾಗೂ ಇಎಸ್‍ಐ ಪಿಎಫ್ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ