ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅತೃಪ್ತ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

 

ಬೆಂಗಳೂರು, ಜೂ.9- ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅನೇಕ ಮಂದಿ ಅತೃಪ್ತ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ನಾವು ಅಧಿಕಾರದ ಹಿಂದೆ ಬೀಳದೆ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಸಮರ್ಥವಾಗಿ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ನಡೆಯುತ್ತಿರುವಕೆಲವು ವಿದ್ಯಮಾನಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಕೆಲವು ಶಾಸಕರು ಬೇಸತ್ತು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಆದ್ಯತೆ ಮೇರೆಗೆ ಯಾರನ್ನು ಯಾವ ಸಂದರ್ಭದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಜಿಲ್ಲಾ ನಾಯಕರು ತೀರ್ಮಾನಿಸಲಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಅಸಮಾಧಾನವನ್ನಾಗಲಿ, ಭಿನ್ನಮತವನ್ನು ನಾವು ಸದುಪಯೋಗಪಡಿಸಿಕೊಳ್ಳಲು ಹೋಗುವುದಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬುದು ನನಗೆ ಗೊತ್ತು. ಅಲ್ಲಿಯವರೆಗೆ ಪ್ರತಿಪಕ್ಷವಾಗಿ ನಾವು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ವಿಧಾನಸಭೆಯಲ್ಲಿ ನಮಗೆ ಸ್ವಲ್ಪದರಲ್ಲೇ ಜನಾದೇಶ ತಪ್ಪಿದೆ. ಆದರೂ ಇದರಿಂದ ಧೃತಿಗೆಡುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಎದ್ದು ನಿಂತರೆ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಜಂಘಾಬಲವೇ ಹುದುಗಿ ಹೋಗಲಿದೆ. ನಮಗೆ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯುವುದಕ್ಕಿಂತ ಹೆಚ್ಚಾಗಿ 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕು. ಇದಕ್ಕಾಗಿ ಯುವ ಮೋರ್ಚಾ ಕಾರ್ಯಕರ್ತರು ಈಗಿನಿಂದಲೇ ಚುನಾವಣೆಗೆ ಸಜ್ಜಾಗಬೇಕೆಂದು ಕರೆ ನೀಡಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 37 ಸ್ಥಾನ ಪಡೆದ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಉದ್ದೇಶ ಇವರದಾಗಿದೆ. ನೀವು ಎಷ್ಟು ದಿನ ಅಧಿಕಾರದಲ್ಲಿ ಮುಂದುವರೆಯುತ್ತೀರೋ ನೋಡುತ್ತೇನೆ ಎಂದು ಬಿಎಸ್‍ವೈ ಮಾರ್ಮಿಕವಾಗಿ ನುಡಿದರು.

ಈ ಹಿಂದೆ ಜೆಡಿಎಸ್ ಜೊತೆ 20-20 ಸರ್ಕಾರ ರಚನೆ ಮಾಡಿದಾಗ ಜೆಡಿಎಸ್ ನಮಗೆ ಅಧಿಕಾರ ಹಸ್ತಾಂತರ ಮಾಡದೆ ಏನು ಮಾಡಿತು ಎಂಬುದು ಕಾಂಗ್ರೆಸ್‍ಗೆ ಗೊತ್ತಿರುವ ಸಂಗತಿಯೇ. ಮುಂದೊಂದು ದಿನ ನೀವೂ ಕೂಡ ಪಶ್ಚಾತ್ತಾಪ ಪಡುವ ದಿನಗಳು ಬರಲಿದೆ ಎಂದು ಎಚ್ಚರಿಸಿದರು.
ಜೆಡಿಎಸ್ ನೀಡಿದ ಭರವಸೆಗಳನ್ನು ಈಡೇರಿಸಬಹುದೆಂಬ ಒಂದೇ ಕಾರಣಕ್ಕಾಗಿ ಜನರು ನಂಬಿ 37 ಸ್ಥಾನ ಕೊಟ್ಟರು. 24 ಗಂಟೆಯೊಳಗೆ ರೈತನ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ ಕುಮಾರಸ್ವಾಮಿ ಅವರು ಮಾತು ತಪ್ಪುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನೀವು ಎರಡಂಕಿ ದಾಟುವುದಿಲ್ಲ ಎಂದು ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ರೈತರು ಸಹಕಾರಿ ಸಂಘಗಳಿಂದ ಪಡೆದ ಎಂಟೂವರೆ ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಈವರೆಗೂ ಆ ಸಾಲ ಮನ್ನಾವಾಗಿಲ್ಲ. ರೈತರು ಬೀಜ ಮತ್ತು ಗೊಬ್ಬರ ಖರೀದಿಗಾಗಿ ಖಾಸಗಿಯವರ ಬಳಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ 15 ದಿನಗಳಿಂದ ಎರಡು ಪಕ್ಷಗಳ ನಡುವೆ ಸಚಿವ ಸಂಪುಟ ವಿಸ್ತರಣೆಯಿಂದ ಉಂಟಾಗಿರುವ ಗೊಂದಲದ ಪರಿಣಾಮ ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿವೆ. ರೈತರ ಸಾಲಮನ್ನಾ ಸೇರಿದಂತೆ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ರಾಜ್ಯದ ನಾನಾ ಕಡೆ ರೈತ ಸಮಾವೇಶಗಳನ್ನು ನಡೆಸಲಾಗುವುದು ಎಂದರು.
ನಮಗೆ ಅನೇಕ ಕಡೆ ಕೆಲವೇ ಮತಗಳ ಅಂತರದಿಂದ ಸೋಲು ಉಂಟಾಗಿದ್ದರಿಂದ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಈಗಲೂ ಚುನಾವಣೆ ನಡೆದರೆ ನಾವು 150 ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವ ಅನುಮಾನವೂ ಇಲ್ಲ.ಕಾರ್ಯಕರ್ತರು ಧೃತಿಗೆಡದೆ ಮೋದಿ ಅವರ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಮತ್ತೊಮ್ಮೆ ಪ್ರಧಾನಿ ಮಾಡಲು ಕಂಕಣಬದ್ಧರಾಗಬೇಕೆಂದು ಕರೆ ಕೊಟ್ಟರು.

ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರತಾಪ್ ಸಿಂಹ ಮಾತನಾಡಿ,ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಬೆರಳೆಣಿಕೆಯಷ್ಟು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದರಿಂದ ಅಧಿಕಾರ ವಂಚಿತರಾದೆವು.
ನಮಗೆ ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೂ ರಾಜ್ಯದಲ್ಲಿ ಜನತೆ ಬಿಜೆಪಿ ಪರವಾಗಿ ಇದ್ದಾರೆ ಎಂಬುದಕ್ಕೆ ನಾವು ಗೆದ್ದಿರುವ 104 ಕ್ಷೇತ್ರಗಳೇ ಸಾಕ್ಷಿ.ಸುಮಾರು 30 ವಿಧಾನಸಭಾ ಕ್ಷೇತ್ರಗಳಲ್ಲಿ 6 ಸಾವಿರ ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಜನರಿಂದ ತಿರಸ್ಕøತರಾದ ಕಳ್ಳರು, ಸುಳ್ಳರು ಒಂದಾಗಿ ಪ್ರಧಾನಿ ಮೋದಿ ಹತ್ಯೆಗೈಯಲು ಸಂಚು ರೂಪಿಸಿದ್ದಾರೆ. ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರೊಂದಿಗೆ ಸ್ವತಂತ್ರ ನಂತರ ಚೀನಾದೊಂದಿಗೆ ಕಮ್ಯುನಿಸ್ಟರು ಕೈ ಜೋಡಿಸಿದ್ದರು. ಜನರಿಂದ ತಿರಸ್ಕøತರಾಗಿದ್ದರೂ ಕಮ್ಯುನಿಸ್ಟ್ ನಾಯಕರು ಇನ್ನು ಎಚ್ಚೆತ್ತುಕೊಂಡಿಲ್ಲ.
ಮೋದಿ ಸೋಲಿಸದಿದ್ದರೆ ನಮಗೆ ಉಳಿಗಾಲ ಇಲ್ಲ ಎಂಬ ಕಾರಣಕ್ಕಾಗಿ ರಾಷ್ಟ್ರದ್ರೋಹಿಗಳ ಜೊತೆ ಕೈ ಜೋಡಿಸಿದ್ದಾರೆ ಎಂದು ಪ್ರತಾಪ್ ಸಿಂಹ ಆಪಾದಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಶಾಸಕ ಅರವಿಂದ್‍ಲಿಂಬಾವಳಿ, ಮುಖಂಡ ತಮ್ಮೇಶ್ ಗೌಡ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ