ಬೆಂಗಳೂರು,ಜೂ.8-ನಾನು ಏಕಾಂಗಿಯಲ್ಲ. ನನ್ನೊಂದಿಗೆ 15ರಿಂದ 20 ಶಾಸಕರಿದ್ದಾರೆ. ನಾವೆಲ್ಲ ಒಂದೆಡೆ ಕುಳಿತು ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಿ ಮುಂದೆ ಕೈಗೊಳ್ಳಬಹುದಾದ ನಿರ್ಣಯದ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಶಾಸಕ ಎಂ.ಬಿ.ಪಾಟೀಲ್ ಇಂದಿಲ್ಲಿ ತಿಳಿಸಿದರು.
ಸದಾಶಿವನಗರದಲ್ಲಿರುವ ಪಾಟೀಲ್ ಅವರ ನಿವಾಸಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಕುಳಿತ ಚರ್ಚಿಸಿಯೇ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ನನ್ನ ಮನೆಗೆ ಬರುತ್ತೇನೆ ಎಂದಾಗ ನಾನು ಬೇಡವೆನ್ನಲ್ಲು ಸಾಧ್ಯವಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಕಳೆದ ಮೂರು ದಿನಗಳ ಬೆಳವಣಿಗೆಯಿಂದ ಅನೇಕ ಶಾಸಕರಿಗೆ ನೋವು ತಂದಿದೆ. ಮುಂದಿನ ಮೂರ್ನಾಲ್ಕು ದಿನಗಳೊಳಗೆ ನಾವೆಲ್ಲರೂ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ನಾನು ಅತೃಪ್ತ ಶಾಸಕರ ನೇತೃತ್ವ ವಹಿಸಿಲ್ಲ. ನಾವೆಲ್ಲರು ಸಮಾನ ಮನಸ್ಕರು. ಹೀಗಾಗಿ ಎಲ್ಲರೂ ಒಟ್ಟಿಗೆ ಕುಳಿತು ಚರ್ಚಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.