ವಿಧಾನಪರಿಷತ್‍ನ ಮೂರು ಶಿಕ್ಷಕರ ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ಮಳೆಯ ನಡುವೆಯೂ ನಡೆದ ಬಿರುಸಿನ ಮತದಾನ

 

ಬೆಂಗಳೂರು,ಜೂ.8- ವಿಧಾನಪರಿಷತ್‍ನ ಮೂರು ಶಿಕ್ಷಕರ ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ಮಳೆಯ ನಡುವೆಯೂ ಬಿರುಸಿನ ಮತದಾನ ನಡೆಯಿತು.
ಬೆಳಗ್ಗೆಯಿಂದಲೇ ಆರಂಭವಾದ ಮಳೆಯಿಂದಾಗಿ ಆರಂಭದಲ್ಲಿ ಕೆಲವೆಡೆ ನೀರಸ ಮತದಾನವೆನಿಸಿದರೂ ನಂತರ ಮತದಾರರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು ಅದರಲ್ಲೂ ಪ್ರಜ್ಞಾವಂತ ಹಾಗೂ ಪದವೀಧರರ ಚುನಾವಣೆ ಇದಾಗಿರುವುದರಿಂದ ಇದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪರವೋ, ವಿರೋಧವೋ ಎಂಬ ಕುತೂಹಲವೂ ಮೂಡಿಸಿದೆ.
ಆಗ್ನೇಯ ಶಿಕ್ಷಕರ ಕ್ಷೇತ್ರ( ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ) ಒಟ್ಟು ಮತದಾರರು 19402, ಬೆಂಗಳೂರು ಪದವೀಧರ ಕ್ಷೇತ್ರ(ಬೆಂಗಳೂರು ನಗರ-ಗ್ರಾಮಾಂತರ, ರಾಮನಗರ)-ಒಟ್ಟು ಮತದಾರರು 63354, ದಕ್ಷಿಣ ಶಿಕ್ಷಕರ ಕ್ಷೇತ್ರ (ಹಾಸನ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ)-ಒಟ್ಟು 20678 ಮತದಾರರು ಇದ್ದಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರ( ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ)-ಒಟ್ಟು ಮತದಾರರು 20481, ನೈರುತ್ಯ ಪದವೀಧರ ಕ್ಷೇತ್ರ(ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ) -ಒಟ್ಟು 67306 ಮತದಾರರು, ಈಶಾನ್ಯ ಪದವೀಧರ ಕ್ಷೇತ್ರ(ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಾಗಲಕೋಟೆ, ಬಿಜಾಪುರ, ಬೀದರ್ ಹಾಗೂ ಕಲಬುರಗಿ)- 82054 ಮತದಾರರು ಇದ್ದು ಈ ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7ರಿಂದ ಮತದಾನ ಆರಂಭವಾಗಿದೆ. ಸಂಜೆ 5ರವರೆಗೆ ನಡೆಯಲಿದೆ.
ಜೂ.12ರಂದು ಫಲಿತಾಂಶ ಹೊರಬೀಳಲಿದ್ದು , ಇಂದು ನಡೆಯಲಿರುವ ಮತದಾನದಲ್ಲಿ ಪದವೀಧರ ಕ್ಷೇತ್ರದ ಮತದಾರರಿಗೆ ಬಲಗೈ ತೋರುಬೆರಳಿಗೆ, ಶಿಕ್ಷಕರ ಕ್ಷೇತ್ರದ ಮತದಾರರಿಗೆ ಬಲಗೈ ಮಧ್ಯದ ಬೆರಳಿಗೆ ಶಾಹಿ ಹಾಕಲಾಯಿತು.

ಶಿಕ್ಷಕರ ಕ್ಷೇತ್ರದ ಮತ ಚಲಾವಣೆಗೆ ಪಿಂಕ್ ಬಣ್ಣದ ಬ್ಯಾಲೆಟ್ ಪೇಪರ್ ಹಾಗೂ ಪದವೀಧರ ಕ್ಷೇತ್ರದಲ್ಲಿ ಬಿಳಿ ಬಣ್ಣದ ಬ್ಯಾಲೆಟ್ ಪೇಪರ್‍ನ್ನು ಬಳಸಲಾಗಿದೆ.
ಕುಣಿಗಲ್: ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕುಣಿಗಲ್‍ನಲ್ಲಿ ಬೆಳಿಗ್ಗೆ 8ರಿಂದ ಪಟ್ಟಣದ ತಹಸೀಲ್ದಾರ ಕಛೇರಿಯಲ್ಲಿ ಮತದಾನ ನಡೆಯಿತು. ತುಂತುರು ಮಳೆಯಿಂದಾಗಿ ಮತದಾನ ನಿರಾಸವಾಗಿತ್ತು.

ಈ ಕ್ಷೇತ್ರದಲ್ಲಿ ಒಟ್ಟು 6.818 ಮತದಾರರಿದ್ದು ಅತೀ ಹೆಚ್ಚಿನ ಮತದಾರರು ತುಮಕೂರು ಜಿಲ್ಲೆಯಲ್ಲಿದ್ದಾರೆ.
ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸೇರಿದಂತೆ 12 ಜನ ಕಣದಲ್ಲಿದ್ದರು. ಈ ಪೈಕಿ ಜೆಡಿಎ¸ನ ರಮೇಶಬಾಬು , ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ನಡುವೆ ನೇರ ಸ್ಪರ್ಧೆ ಇದೆ. ಇಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ.

ಇಂದು ಕೂಡ ರಮೇಶ ಬಾಬು ಪರವಾಗಿ ಉಪನ್ಯಾಸಕರು ಸೇರಿದಂತೆ ಹಲವು ಮುಖಂಡರು ಮತದಾರರನ್ನು ಸಳೆಯುವಲ್ಲಿ ಸಕ್ರೀಯರಾಗಿದ್ದರು. ಆದರೆ ಮಳೆಯಿಂದಾಗಿ ಮತದಾರರು ಮಾತ್ರ ಮತದಾನ ಮಾಡುವ ಯಾವುದೇ ಲಕ್ಷಣಗಳು ಕಾಣಿಸಲಿಲ್ಲ.
ಕೋಲಾರ:ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾನ ಕೋಲಾರ ಜಿಲ್ಲೆಯಲ್ಲಿ ಭರದಿಂದ ಸಾಗಿತ್ತು. 15 ಅಭ್ಯರ್ಥಿಗಳಿರುವ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹಣಾಹಣಿ ನಡೆದಿದೆ. ಮಹಿಳೆಯರು 1385 ಮತ್ತು 2018 ಪುರುಷರು ಸೇರಿದಂತೆ 3403 ಮತದಾರರು ಜಿಲ್ಲೆಯ ಆರು ತಾಲೂಕು ಕೇಂದ್ರಗಳಲ್ಲಿನ ತಹಸೀಲ್ದಾರ್ ಕಚೇರಿಗಳಲ್ಲಿ ಮತದಾನ ನಡೆಯಿತು.

ಮತದಾನ ಕೇಂದ್ರಗಳ ಮುಂದೆ ಅಭ್ಯರ್ಥಿಗಳ ಪರವಾಗಿ ಹಾಕಿದ ಪೆಂಡಾಲ್‍ಗಳನ್ನು ಪೆÇಲೀಸರು ತೆರವುಗೊಳಿಸಿದ್ದಾರೆ. ಅಭ್ಯರ್ಥಿಗಳ ಪರವಾಗಿ ಭೋಜನ ವ್ಯವಸ್ಥೆ ಸಹ ಮಾಡಿದ್ದರು.ಇದೇ ವೇಳೆ ಬಿರುಸಿನ ಪ್ರಚಾರ ಕೂಡ ನಡೆಸಲಾಯಿತು.
ಈ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನಿಂದ ಎಂ.ರಾಮಪ್ಪ , ರಾಮೋಜಿಗೌಡ, ಎಂ.ಲಕ್ಷ್ಮಣ್, ಕೆ.ಕೆ.ಮಂಜುನಾಥ್, ಎಸ್.ಪಿ.ದಿನೇಶ್, ಚಂದ್ರಶೇಖರ ಪಾಟೀಲ, ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ, ಅ.ದೇವೇಗೌಡ, ಬಿ.ನಿರಂಜನಮೂರ್ತಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅಯನೂರು ಮಂಜುನಾಥ್, ಕೆ.ಬಿ.ಶ್ರೀನಿವಾಸ್, ಜೆಡಿಎಸ್‍ನಿಂದ ಎಂ.ಎ.ರಮೇಶ್ ಬಾಬು, ಅಚ್ಚೇಗೌಡ, ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ, ಅರುಣ್‍ಕುಮಾರ್, ಪ್ರತಾಪ್ ರೆಡ್ಡಿ ಕಣದಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ