
ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದಕ್ಕಾಗಿ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ಎಂಬಿ ಪಾಟೀಲ್ ಮನವೊಲಿಕೆಗೆ ಕಾಂಗ್ರೆಸ್ ಘಟಾನುಘಟಿ ನಾಯಕರುಗಳು ಪ್ರಯತ್ನಿಸುತ್ತಿದ್ದರೂ ಕೂಡಾ ಯಾವುದಕ್ಕೂ ಜಗ್ಗದ ಹಿನ್ನೆಲೆಯಲ್ಲಿ ಇದೀಗ ಸಿಎಂ ಎಚ್ ಡಿ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಶುಕ್ರವಾರ ಬೆಳಗ್ಗೆ ಡಿಸಿಎಂ ಪರಮೇಶ್ವರ್, ಡಿಕೆ ಶಿವಕುಮಾರ್ ಹಾಗೂ ಆರ್ ವಿ ದೇಶಪಾಂಡೆ ಸದಾಶಿವನಗರದಲ್ಲಿರುವ ಎಂಬಿ ಪಾಟೀಲ್ ಮನೆಗೆ ಭೇಟಿ ನೀಡಿ ಮನವೊಲಿಕೆಗೆ ಮುಂದಾಗಿದ್ದರು.
ನನ್ನ ಸಚಿವ ಸ್ಥಾನ ತಪ್ಪಿಸಿದ್ದು ಯಾರು?
ನನಗೆ ಯಾಕೆ ಸಚಿವ ಸ್ಥಾನ ಕೊಡಲಿಲ್ಲ ಹೇಳಿ? ಯಾರು ನನಗೆ ಸಚಿವ ಕೊಡಬೇಡಿ ಎಂದು ಹೇಳಿ ಎಂದು ಎಂಬಿ ಪಾಟೀಲ್ ನೇರವಾಗಿ ಪರಮೇಶ್ವರ್ ಅವರನ್ನು ಪ್ರಶ್ನಿಸಿದ್ದಾರೆನ್ನಲಾಗಿದೆ. ನಾನು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ನನಗೆ 2ನೇ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಿದರೆ ನನ್ನ ಹಿರಿತನಕ್ಕೆ ಬೆಲೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆನ್ನಲಾಗಿದೆ.
ನಿಮ್ಮ ಸಚಿವಗಿರಿ ಯಾರಿಗೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿರುವ ಎಂಬಿ ಪಾಟೀಲ್ ಮನವೊಲಿಕೆಗೆ ಬಗ್ಗದ ನಿಟ್ಟಿನಲ್ಲಿ ಸಂಧಾನ ವಿಫಲವಾಗಿದೆ ಎಂದು ವರದಿ ವಿವರಿಸಿದೆ.