
ಕೌಲಾಲಂಪುರ :
ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಾಕಪ್ ನಲ್ಲಿ ಭಾರತ ಮತ್ತೊಮ್ಮೆ ಪಾರಮ್ಯ ಮೆರೆದಿದೆ. ಶ್ರೀಲಂಕಾ ವಿರುದ್ಧ 7 ವಿಕೆಟ್ ಗಳ ಜಯಭೇರಿ ಭಾರಿಸಿದ ಭಾರತದ ವನಿತೆಯರು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.
ಸಿಂಹಳದ ವನಿತೆಯರು ಟಾಸ್ ಗೆದ್ದು ಮೊದಲ ಬ್ಯಾಾಟಿಂಗ್ ಮಾಡಿದರೂ ಭಾರತದ ವನಿತೆಯರ ಸಂಘಟಿತ ದಾಳಿಗೆ ತತ್ತರಿಸಿದರು. ಭಾರತ ತಂಡದ ಉತ್ತಮ ದಾಳಿಗೆ ಸಿಲುಕಿದ ಶ್ರೀಲಂಕಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 107ರನ್ ಗಳಿಸಲು ಮಾತ್ರ ಶಕ್ಯರಾದರು.
ಶ್ರೀಲಂಕಾದ ಪರ ಹಾಸಿನಿ ಪೆರೇರಾ 43 ಎಸೆತಗಳಲ್ಲಿ 4 ಬೌಂಡರಿ ಯುಕ್ತ 46ರನ್ ಗಳಿಸಿದರೆ, ಆರಂಭಿಕ ಆಟಗಾರ್ತಿ ಯಶೋದಾ ಮೆಂಡಿಸ್ 39 ಎಸೆತಗಳಲ್ಲಿ 1 ಬೌಂಡರಿ ಉಳ್ಳ 27 ರನ್ ಗಳಿಸಿದರು. ಉಳಿದ ಯಾವುದೇ ಆಟಗಾರ್ತಿಯರೂ ಎರಡಂಕಿ ಮೊತ್ತ ತಲುಪಲಿಲ್ಲ. ಭಾರತದ ಪರ ಎಲ್ಲ ಬೌಲರ್ ಗಳೂ ಉತ್ತಮ ದಾಳಿ ನಡೆಸಿದರು. ಏಕ್ತಾ ಬಿಷ್ತ್ 20ರನ್ ಗೆ 2, ಅನುಜಾ ಪಾಟೀಲ್ 19ಕ್ಕೆ 1, ಜೂಲಾನ್ ಗೋಸ್ವಾಮಿ 20ಕ್ಕೆ 1 ಹಾಗೂ ಪೂನಮ್ ಯಾದವ್ 23ರನ್ ಗೆ 1 ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಅನುಭವಿ ಆಟಗಾರ್ತಿ ಮಿಥಾಲಿ ರಾಜ್ 33 ಎಸೆತಗಳಲ್ಲಿ 1 ಬೌಂಡರಿ ಉಳ್ಳ 23, ಸ್ಮೃತಿ ಮಂದನಾ 16 ಎಸೆತಗಳಲ್ಲಿ 12ರನ್ ಭಾರಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ 25 ಎಸೆತಗಳಲ್ಲಿ 24ರನ್ ಗಳಿಸಿದರು. ಕರ್ನಾಟಕದ ವೇದಾ ಕೃಷ್ಣಮೂರ್ತಿ 23 ಎಸೆತಗಳಲ್ಲಿ 29 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅವರು 4 ಬೌಂಡರಿ ಭಾರಿಸಿದ್ದರು. ಅವರಿಗೆ ಉತ್ತಮ ಜೊತೆಗಾರಿಕೆ ನೀಡಿದ ಅನುಜಾ ಪಾಟೀಲ್ 16 ಎಸೆತಗಳಲ್ಲಿ 19ರನ್ ಗಳಿಸಿದರು.
ಬ್ಯಾಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಅನುಜಾ ಪಾಟೀಲ್ ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭ್ಯವಾಯಿತು. ಈ ಗೆಲುವಿನಿಂದಾಗಿ ಭಾರತದ ವನಿತೆಯರ ತಂಡ ಪಂದ್ಯಾಾವಳಿಯಲ್ಲಿ 4 ಪಂದ್ಯಗಳಲ್ಲಿ 3 ಗೆಲುವು, 1 ಸೋಲು ಒಳಗೊಂಡು 6 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.