
ವಾಷಿಂಗ್ಟನ್, ಜೂ.7-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಪ್ರಥಮ ಬಾರಿಗೆ ಶ್ವೇತಭವನದಲ್ಲಿ ಇಫ್ತಾರ್ ಕೂಟ ಆಯೋಜಿಸಿ ಮುಸ್ಲಿಂ ಜಗತ್ತಿನ ಸಹಕಾರ ಕೋರಿದ್ದಾರೆ.
ವಾರ್ಷಿಕ ಇಫ್ತಾರ್ ಕೂಟಕ್ಕೆ ಅಮೆರಿಕದ ಹಿಂದಿನ ಅಧ್ಯಕ್ಷರು ಹೇರಿದ್ದ ದಶಕಗಳ ನಿರ್ಬಂಧವನ್ನು ಟ್ರಂಪ್ ತೆರವುಗೊಳಿಸಿ, ನಿನ್ನೆ ವೈಟ್ಹೌಸ್ನಲ್ಲಿ ಮುಸ್ಲಿಂ ಮುಖಂಡರಿಗಾಗಿ ಭರ್ಜರಿ ರಂಜಾನ್ ಇಫ್ತಾರ್ ಕೂಟ ಆಯೋಜಿಸಿ ಈದ್ ಶುಭ ಕೋರಿದರು. ಮೂಲತ: ಮುಸ್ಲಿಂ ವಿರೋಧಿಯಾಗಿರುವ ಟ್ರಂಪ್ ಪ್ರಥಮ ಬಾರಿಗೆ ಇಫ್ತಾರ್ ಭೋಜನ ಕೂಟ ಏರ್ಪಡಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಇದೇ ವೇಳೆ ಭವಿಷ್ಯದಲ್ಲಿ ಎಲ್ಲರ ಭದ್ರತೆ ಮತ್ತು ಶಾಂತಿ-ನೆಮ್ಮದಿಗಾಗಿ ಮುಸ್ಲಿಂ ದೇಶಗಳು ಸಹಕಾರ-ಬೆಂಬಲ ನೀಡಬೇಕೆಂದು ಮನವಿ ಮಾಡಿದರು. 1990ರಲ್ಲಿ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಶ್ವೇತಭವನದಲ್ಲಿ ಇಫ್ತಾರ ಕೂಟ ಆಯೋಜಿಸುತ್ತಿದ್ದರು. ಆನಂತರ ಅಮೆರಿಕ ಮೇಲೆ ನಡೆದ ಭಯೋತ್ಪಾದಕರ ದಾಳಿ ನಂತರ ಇದನ್ನು ರದ್ದುಗೊಳಿಸಲಾಗಿತ್ತು.