ಮೂರು ಶಿಕ್ಷಕರು ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ನಾಳೆ ಮತದಾನ

 

ಬೆಂಗಳೂರು, ಜೂ.7- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ರಾಜ್ಯದ ಮೂರು ಶಿಕ್ಷಕರು ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ.
ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೂ ಮತದಾನ ನಡೆಯಲಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ನಾಳೆ ಬರೆಯಲಿದ್ದಾನೆ.
ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ ಮತದಾರರ ನಾಡಿ ಮಿಡಿತ ಈ ಚುನಾವಣೆಯಿಂದ ಗೊತ್ತಾಗಲಿದೆ.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮಾಡಿಕೊಂಡು ವಿಧಾನಸಭೆಯಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿಕೊಂಡಿವೆ. ಆದರೆ ಈ ಚುನಾವಣೆಯಲ್ಲಿ ಎರಡು ಪಕ್ಷಗಳು ಪರಸ್ಪರ ಎದುರಾಳಿಗಳಾಗಿವೆ. ಬಿಜೆಪಿ ಕೂಡ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವುದರಿಂದ ಜನಾದೇಶ ಯಾವ ಪಕ್ಷಕ್ಕೆ ಎಂಬುದು 12ರಂದು ಪ್ರಕಟವಾಗುವ ಫಲಿತಾಂಶದಲ್ಲಿ ತಿಳಿಯಲಿದೆ.

ಎಲ್ಲೆಲ್ಲಿ ಚುನಾವಣೆ:
ಮೂರು ಶಿಕ್ಷಕರು ಹಾಗೂ ಅಷ್ಟೇ ಸಂಖ್ಯೆಯ ಪದವೀಧರ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರ(ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ) ದಕ್ಷಿಣ ಶಿಕ್ಷಕರ ಕ್ಷೇತ್ರವು(ಹಾಸನ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ), ನೈರುತ್ಯ ಶಿಕ್ಷಕರ ಕ್ಷೇತ್ರವು(ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಶಿವಮೊಗ್ಗ,ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಚನ್ನಗಿರಿ) ಒಳಗೊಂಡಿದೆ.
ಇನ್ನು ನೈರುತ್ಯ ಪದವೀಧರ ಕ್ಷೇತ್ರವು( ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಶಿವಮೊಗ್ಗ,ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಚನ್ನಗಿರಿ), ಬೆಂಗಳೂರು ಪದವೀಧರ ಕ್ಷೇತ್ರವು( ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ) ಈಶಾನ್ಯ ಪದವೀಧರ ಕ್ಷೇತ್ರವು(ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಾಗಲಕೋಟೆ, ಬಿಜಾಪುರ, ಬೀದರ್ ಹಾಗೂ ಕಲಬುರಗಿ) ಒಳಗೊಂಡಿದೆ.
ಈ ಚುನಾವಣೆಯಲ್ಲಿ ಶಿಕ್ಷಕರು ಮತ್ತು ಪದವೀಧರರು ಮಾತ್ರ ಮತದಾನದ ಹಕ್ಕು ಹೊಂದಿದ್ದಾರೆ.
ಬೆಂಗಳೂರು ಪದವೀಧರ ಕ್ಷೇತ್ರದಿಂದ ಬಿಜೆಪಿಯಿಂದ ಅ.ದೇವೇಗೌಡ, ಜೆಡಿಎಸ್‍ನಿಂದ ಅಚ್ಚೇಗೌಡ ಶಿವಣ್ಣ ಹಾಗೂ ಕಾಂಗ್ರೆಸ್‍ನಿಂದ ರಾಮೋಜಿಗೌಡ ಕಣಕ್ಕಿಳಿದಿದ್ದಾರೆ. ಒಟ್ಟು 65,223 ಮತದಾರರು ಇದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ವಿಧಾನಪರಿಷತ್‍ನ ಉಪಸಭಾಪತಿ ಮರಿತಿಬ್ಬೇಗೌಡ, ಕಾಂಗ್ರೆಸ್‍ನಿಂದ ಎಂ.ಲಕ್ಷ್ಮಣ, ಬಿಜೆಪಿಯಿಂದ ನಿರಂಜನ ಮೂರ್ತಿ ಸ್ಪರ್ಧಿಸಿದ್ದಾರೆ.
12,938 ಪುರುಷರು ಹಾಗೂ 7735 ಮಹಿಳೆಯರು ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 20,678 ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‍ನ ರಮೇಶ್ ಬಾಬು ಮರು ಆಯ್ಕೆ ಬಯಸಿದ್ದರೆ ಇವರಿಗೆ ಕಾಂಗ್ರೆಸ್‍ನಿಂದ ಎಂ.ರಾಮಪ್ಪ , ಬಿಜೆಪಿಯಿಂದ ಮಾಜಿ ಶಾಸಕ ವೈ.ಎ.ನಾರಾಯಣಸ್ವಾಮಿ ಸ್ಫರ್ಧೆವೊಡ್ಡಿದ್ದಾರೆ.
13461 ಪುರುಷರು ಹಾಗೂ 5,940 ಮಹಿಳಾ ಮತದಾರರು ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 19402 ಮತದಾರರು ಇದ್ದಾರೆ.
ಬಿಜೆಪಿ ಭದ್ರಕೋಟೆ ಎನಿಸಿರುವ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಪ್ರತಾಪ್ ರೆಡ್ಡಿ , ಕಾಂಗ್ರೆಸ್‍ನಿಂದ ಚಂದ್ರಶೇಖರ್ ಪಾಟೀಲ್ ಹಾಗೂ ಬಿಜೆಪಿಯಿಂದ ಶ್ರೀನಿವಾಸ ಕಣಕ್ಕಿಳಿದಿದ್ದಾರೆ.

ಅತ್ಯಂತ ದೊಡ್ಡ ಕ್ಷೇತ್ರವಾಗಿರುವ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 57,852 ಪುರುಷರು ಹಾಗೂ 24,194 ಮಹಿಳೆಯರು ಸೇರಿದಂತೆ ಒಟ್ಟು 82,054 ಮತದಾರರು ನಾಳೆ ತಮ್ಮ ಹಕ್ಕನ್ನು ಚಲಾಯಿಸುವರು.
ಬಿಜೆಪಿಯ ಮತ್ತೊಂದು ಭದ್ರಕೋಟೆಯಾಗಿರುವ ನೈರುತ್ಯ ಶಿಕ್ಷಕರ ಕೇತ್ರದಿಂದ ಕಳೆದ ಮೂರು ಬಾರಿ ಗೆದ್ದಿರುವ ವಿಧಾನಪರಿಷತ್‍ನ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದ ಬಿಜೆಪಿಯ ಗಣೇಶ್ ಕಾರ್ನಿಕ್, ಕಾಂಗ್ರೆಸ್‍ನಿಂದ ಮಂಜುನಾಥ್‍ಕುಮಾರ್, ಜೆಡಿಎಸ್‍ನಿಂದ ಎಸ್.ಎಲ್.ಭೋಜೇಗೌಡ ಸ್ಪರ್ಧಿಸಿದ್ದಾರೆ.
10,926 ಪುರುಷ ಮತದಾರರು, 9,550 ಮಹಿಳಾ ಮತದಾರರು ಹಾಗೂ ಇತರರು 5 ಸೇರಿದಂತೆ ಒಟ್ಟು 20,481 ಮತದಾರರು ಇದ್ದಾರೆ.
ವಿಧಾನಪರಿಷತ್‍ನ ಸಭಾಪತಿಯಾಗಿ ಕಳೆದ ಆರು ಬಾರಿಯಿಂದ ಗೆದ್ದಿದ್ದ ಡಿ.ಎಚ್.ಶಂಕರಮೂರ್ತಿ ಅವರ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಮಾಜಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದಾರೆ.
ಕಾಂಗ್ರೆಸ್‍ನಿಂದ ಎಸ್‍ಪಿ ದಿನೇಶ್ ಹಾಗೂ ಜೆಡಿಎಸ್‍ನಿಂದ ಅರುಣ್‍ಕುಮಾರ್ ಕಣಕ್ಕಿಳಿದಿದ್ದಾರೆ. 39,129 ಪುರುಷರು ಹಾಗೂ 28160 ಮಹಿಳೆಯರು ಸೇರಿದಂತೆ ಒಟ್ಟು 67,306 ಮತದಾರರು ಇದ್ದಾರೆ.
12ರಂದು ಮತಗಳ ಎಣಿಕೆ ನಡೆಯಲಿದ್ದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಕ್ಷೇತ್ರಗಳು:
ಆಗ್ನೇಯ ಶಿಕ್ಷಕರ ಕ್ಷೇತ್ರ
ಬಿಜೆಪಿ -ವೈ.ಎಸ್.ನಾರಾಯಣಸ್ವಾಮಿ
ಕಾಂಗ್ರೆಸ್-ಎಂ.ರಾಮಪ್ಪ
ಜೆಡಿಎಸ್- ರಮೇಶ್ ಬಾಬು
ಒಟ್ಟು ಮತದಾರರು- 19402

ದಕ್ಷಿಣ ಶಿಕ್ಷಕರ ಕ್ಷೇತ್ರ
ಬಿಜೆಪಿ -ನಿರಂಜನಮೂರ್ತಿ
ಕಾಂಗ್ರೆಸ್-ಎಂ.ಲಕ್ಷ್ಮಣ
ಜೆಡಿಎಸ್- ಮರಿತಿಬ್ಬೇಗೌಡ
ಒಟ್ಟು ಮತದಾರರು -20678

ನೈರುತ್ಯ ಶಿಕ್ಷಕರ ಕ್ಷೇತ್ರ
ಬಿಜೆಪಿ -ಗಣೇಶ್ ಕಾರ್ನಿಕ್
ಕಾಂಗ್ರೆಸ್-ಮಂಜುನಾಥ್ ಕುಮಾರ್
ಜೆಡಿಎಸ್- ಎಸ್.ಎಲ್.ಬೋಜೇಗೌಡ
ಒಟ್ಟು ಮತದಾರರು- 20,481

ನೈರುತ್ಯ ಪದವೀಧರ ಕ್ಷೇತ್ರ
ಬಿಜೆಪಿ -ಆಯನೂರು ಮಂಜುನಾಥ್
ಕಾಂಗ್ರೆಸ್-ಎಸ್.ಪಿ.ದಿನೇಶ್
ಜೆಡಿಎಸ್- ಅರುಣ್ ಕುಮಾರ್
ಒಟ್ಟು ಮತದಾರರು- 67,306

ಬೆಂಗಳೂರು ಪದವೀಧರ ಕ್ಷೇತ್ರ
ಬಿಜೆಪಿ -ಆ.ದೇವೇಗೌಡ
ಕಾಂಗ್ರೆಸ್-ರಾಮೋಜಿ ಗೌಡ
ಜೆಡಿಎಸ್- ಅಚ್ಚೇಗೌಡ ಶಿವಣ್ಣ
ಒಟ್ಟು ಮತದಾರರು-65223

ಈಶಾನ್ಯ ಪದವೀಧರ ಕ್ಷೇತ್ರ
ಬಿಜೆಪಿ -ಶ್ರೀನಿವಾಸ್
ಕಾಂಗ್ರೆಸ್-ಚಂದ್ರಶೇಖರ್ ಪಾಟೀಲ್
ಜೆಡಿಎಸ್-ಪ್ರತಾಪ್ ರೆಡ್ಡಿ
ಒಟ್ಟು ಮತದಾರರು-82,054

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ