
ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಾರ್ಷಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಇಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣ ಮಾಡಲಿದ್ದು, ಇಡೀ ರಾಷ್ಟ್ರದ ಚಿತ್ತ ಆರ್‌ಎಸ್‌ಎಸ್ ವೇದಿಕೆಯತ್ತ ನೆಟ್ಟಿದೆ.
ಮಹಾರಾಷ್ಟ್ರದ ನಾಗ್ಪುರದ ಆರ್‌ಎಸ್‌ಎಸ್‌ನ ಮುಖ್ಯ ಕಚೇರಿಯಲ್ಲಿ ತೃತೀಯ ವರ್ಷದ ಶಿಕ್ಷಾವರ್ಗದ ಸಮಾರೋಪ ಸಮಾರಂಭ ಇಂದು ನಡೆಯಲಿದೆ. ಪ್ರಣಬ್ ಮುಖರ್ಜಿ ಸಮಾರಂಭದ ಮುಖ್ಯ ಅತಿಥಿ ಆಗಿದ್ದು, ರಾಷ್ಟ್ರೀಯತೆ ಬಗ್ಗೆ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಬುಧವಾರವೇ ಅವರು ನಾಗ್ಪುರಕ್ಕೆ ಆಗಮಿಸಿದ್ದಾರೆ. ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಣಬ್ ಅವರನ್ನು ಅಪಾರ ಸಂಖ್ಯೆಯ ಆರ್‌ಎಸ್‌ಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು.
ಕಾಂಗ್ರೆಸ್‌ನ ಟ್ರಬಲ್ ಶೂಟರ್ ಎಂದೇ ಪ್ರಸಿದ್ಧರಾಗಿದ್ದ ಪ್ರಣಬ್, ಆರ್‌ಎಸ್‌ಎಸ್ ಸಮಾರೋಪದಲ್ಲಿ ಭಾಗವಹಿಸುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಜೊತೆಗೆ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರಣಬ್ ಅವರ ನಿರ್ಧಾರ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪವನ್ನು ವ್ಯಕ್ತಡಿಸಿದ್ದರು. ಅಲ್ಲದೇ, ತಮ್ಮ ತೀರ್ಮಾನವನ್ನು ಪರಿಶೀಲಿಸುವಂತೆ ಕೈ ಹಿರಿಯ ಮುಖಂಡರು ಪ್ರಣಬ್‌ರಿಗೆ ಕೇಳಿಕೊಂಡಿದ್ದರು.