ಯಾರಾಗಲಿದ್ದಾರೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ?

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದರೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮಾತ್ರ ಎರಡೂ ಪಕ್ಷಗಳು ಸಮಾನ ಹೋರಾಟದಲ್ಲಿ ತೊಡಗಿವೆ. ಇನ್ನೊಂದೆಡೆ ಬಿಜೆಪಿ ಕೂಡ ಸಮ್ಮಿಶ್ರ ಸರ್ಕಾರದ ಪಕ್ಷಗಳಿಗೆ ತಿರುಗೇಟು ನೀಡಲು ರಣತಂತ್ರ ಹೆಣೆಯುತ್ತಿದೆ.
ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಮೂರು ತಾಲೂಕುಗಳ (ದಾವಣಗೆರೆ, ಹರಿಹರ, ಜಗಳೂರು) ವ್ಯಾಪ್ತಿಯನ್ನು ಹೊಂದಿರುವ ಆಗ್ನೇಯ ಶಿಕ್ಷಕರ ಕ್ಷೇತ್ರ ಮೂರು ಪಕ್ಷಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾಗಿದೆ.
ಒಟ್ಟು 19,402 ಶಿಕ್ಷಕ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ 13,461 ಪುರುಷರು, 5940 ಮಹಿಳಾ ಮತ್ತು ಓರ್ವ ಇತರೆ ಮತದಾರರಿದ್ದಾರೆ. ಜೆಡಿಎಸ್‌‌‌ನಿಂದ ಹಾಲಿ ಸದಸ್ಯ ರಮೇಶ್ ಬಾಬು, ಬಿಜೆಪಿಯಿಂದ ಮಾಜಿ ಶಾಸಕ ವೈ.ಎ. ನಾರಾಯಣಸ್ವಾಮಿ, ಕಾಂಗ್ರೆಸ್‌‌ನಿಂದ ನಿವೃತ್ತ ಶಿಕ್ಷಕ ಎಂ. ರಾಮಪ್ಪ ಸೇರಿದಂತೆ ಒಟ್ಟು 14 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಪ್ರೌಢಶಾಲೆ ಮತ್ತು ಅದಕ್ಕಿಂತ ಮೇಲ್ಪಟ್ಟ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರು ಮತ ಚಲಾವಣೆ ಮಾಡಲಿದ್ದಾರೆ. ಮೂರು ಪಕ್ಷಗಳು ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಶತಾಯಗತಾಯ ಗೆಲ್ಲಲು ರಣತಂತ್ರ ಹೂಡಿವೆ.
ಸಿಎಂ ಕುಮಾರಸ್ವಾಮಿ ವರ್ಚಸ್ಸು ಜೆಡಿಎಸ್ ಅಭ್ಯರ್ಥಿಗೆ ಶ್ರೀರಕ್ಷೆ
ಪ್ರಸ್ತುತ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಮೇಶ್ ಬಾಬುರನ್ನೇ ಜೆಡಿಎಸ್ ಮತ್ತೊಮ್ಮೆ ಕಣಕ್ಕೆ ಇಳಿಸಿದೆ. ಶತಾಯಗತಾಯ ಕ್ಷೇತ್ರವನ್ನು ಉಳಿಸಿಕೊಳ್ಳಲು ಮಾಜಿ ಪ್ರಧಾನಿ ದೇವೇಗೌಡರು ಖುದ್ದು ಅಖಾಡಕ್ಕೆ ಇಳಿದಿದ್ದಾರೆ. ತುಮಕೂರು ಸೇರಿದಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷವು ತನ್ನದೇ ಆದ ಅಸ್ತಿತ್ವ ಹೊಂದಿದೆ. ಅಲ್ಲದೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವರ್ಚಸ್ಸನ್ನು ವ್ಯವಸ್ಥಿತವಾಗಿ ಬಳಸಲು ಜೆಡಿಎಸ್ ಮುಂದಾಗಿದೆ.
ಹೆಚ್‌ಡಿಕೆ ಸಿಎಂ ಆಗಿರುವುದು ಕೂಡ ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸಲು ಸಹಕಾರಿಯಾಗಲಿದೆ. ಹೀಗಾಗಿ ಶಿಕ್ಷಕರ ಸಮಸ್ಯೆಗಳನ್ನ ಸಿಎಂ ಕುಮಾರಸ್ವಾಮಿ ಬಳಿ ಹೇಳಿಕೊಂಡರೆ ಖಂಡಿತಾ ಬಗೆಹರಿಯಲಿದೆ ಎಂದು ಶಿಕ್ಷಕ ಸಮುದಾಯ ಮತಗಳನ್ನು ಸೆಳೆಯಲು ಅಭ್ಯರ್ಥಿ ಮುಂದಾಗಿದ್ದಾರೆ. ದೇವೇಗೌಡರು ಸಹ ಒಂದು ಸುತ್ತಿನ ಪ್ರಚಾರ ನಡೆಸಿ, ಈ ಬಾರಿಯೂ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಗೆಲುವಿಗೆ ಸಹಕರಿಸುವಂತೆ ಪ್ರಚಾರದಲ್ಲಿ ತೊಡಗಿದ್ದಾರೆ.
ಸಮ್ಮಿಶ್ರ ಸರ್ಕಾರ ಶೀಘ್ರ ಪತನವಾಗಲಿದೆ ಎನ್ನುತ್ತಿದ್ದಾರೆ ಬಿಜೆಪಿ ಅಭ್ಯರ್ಥಿ:
ಇದೇ ಕ್ಷೇತ್ರದಿಂದ 2 ಬಾರಿ ವಿಧಾನಪರಿಷತ್‌‌‌ಗೆ ಆಯ್ಕೆಯಾಗಿ ನಂತರ ಕ್ಷೇತ್ರ ತೊರೆದಿದ್ದ ವೈ.ಎ. ನಾರಾಯಣಸ್ವಾಮಿ ಪುನಃ ಬಿಜೆಪಿ ಅಭ್ಯರ್ಥಿಯಾಗಿ ಕ್ಷೇತ್ರದತ್ತ ಮುಖಮಾಡಿದ್ದಾರೆ. ಈ ಹಿಂದೆ ಹೆಬ್ಬಾಳ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದ ಇವರು, ಈ ಬಾರಿ ಅದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡಿದ್ದಾರೆ.
ಇದೀಗ ಮತ್ತೊಮ್ಮೆ ತಮ್ಮ ಆಗ್ನೇಯ ಶಿಕ್ಷಕರ ಕ್ಷೇತ್ರದತ್ತ ಮುಖ ಮಾಡಿದ್ದು ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಪುನಃ ಆಗ್ನೇಯ ಶಿಕ್ಷಕರ ಕ್ಷೇತ್ರ ಬಿಟ್ಟು ಹೋಗಲ್ಲಾ, ಕೊನೆಯವರೆಗೂ ಶಿಕ್ಷಕರ ಜೊತೆನೇ ಇರ್ತಿನಿ, ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ವರಿಷ್ಠರ ಆದೇಶದ ಮೇರೆಗೆ ಅವರು ಯಾವ ಕೆಲಸ ಮಾಡಬೇಕಿದೆ. ಇನ್ನು ಆರು ತಿಂಗಳಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಲಿದೆ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹೀಗಾಗಿ ನನ್ನನ್ನು ಗೆಲ್ಲಿಸಿ. ಸುಲಭವಾಗಿ ಸಮಸ್ಯೆ ಬಗೆಹರಿಸಲು ಸಹಕಾರಿಯಾಗಲಿದೆ ಎಂದು ಶಿಕ್ಷಕ ಮತದಾರರನ್ನು ಓಲೈಸಲು ಮುಂದಾಗಿದ್ದಾರೆ.
ಕೈ ಅಭ್ಯರ್ಥಿ ವಾದ: 
ಇನ್ನು ಕಾಂಗ್ರೆಸ್ ಪಕ್ಷವು ನಿವೃತ್ತ ಶಿಕ್ಷಕರೊಬ್ಬರಿಗೆ ಟಿಕೆಟ್ ನೀಡಿ ಅಖಾಡಕ್ಕೆ ಇಳಿಸಿದೆ. ಸ್ವಯಂ ನಿವೃತ್ತಿ ಪಡೆದಿರುವ ಶಿಕ್ಷಕ ಎಂ. ರಾಮಪ್ಪ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೂ ಶಿಕ್ಷಕರ ಕ್ಷೇತ್ರದಿಂದ ಆರಿಸಿ ಬಂದವರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಅಲ್ಲದೆ ಶಿಕ್ಷಕರ ಸಮಸ್ಯೆಗಳನ್ನು ಅರಿಯುವಷ್ಟು ತಾಳ್ಮೆಯಿಲ್ಲ. ಹೀಗಾಗಿ ಶಿಕ್ಷಕರು ತಮ್ಮ ಕೈ ಹಿಡಿದಲ್ಲಿ ಬೇಡಿಕೆಗಳ ಈಡೇರಿಕೆಗೆ ಸಮ್ಮಿಶ್ರ ಸರ್ಕಾರದಲ್ಲಿ ಹೋರಾಟ ನಡೆಸಲಾಗುವುದು. ಅಲ್ಲದೆ ಕಾಂಗ್ರೆಸ್‌‌ನ ಪ್ರಬಲ ಮುಖಂಡರು ಸಮ್ಮಿಶ್ರ ಸರ್ಕಾರದಲ್ಲಿದ್ದು ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದಲ್ಲಿ ತೊಡಗಿದ್ದಾರೆ.
ಒಟ್ಟಾರೆ ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಪ್ರಧಾನಿ ದೇವೇಗೌಡರು ಖುದ್ದು ಪ್ರಚಾರಕ್ಕೆ ಧುಮುಕಿದ್ದರೆ ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಪರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಪರ ರಾಜ್ಯಮಟ್ಟದ ಮುಖಂಡರು ಪ್ರಚಾರಕ್ಕಾಗಿ ಬಾರದಿರುವುದು ಒಂದು ರೀತಿಯ ನಿರಾಸಕ್ತಿ ತೋರಿದ್ದಾರೆಯೇ ಎಂಬಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬುದ್ಧಿವಂತ ಶಿಕ್ಷಕರು ಚುನಾವಣೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ, ಶಿಕ್ಷಕ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವ ಸೂಕ್ತ ವ್ಯಕ್ತಿಯಾಗಿ ಹೊರಹೊಮ್ಮಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ