ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ ಡಾ.ಕಸ್ತೂರಿರಂಗನ್ ಮುಂದುವರಿಕೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

 

ಬೆಂಗಳೂರು,ಜೂ.7- ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ ಡಾ.ಕಸ್ತೂರಿರಂಗನ್ ಅವರನ್ನು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕರ್ನಾಟಕ ಜ್ಞಾನ ಆಯೋಗದ ಸದಸ್ಯರೊಂದಿಗೆ ಸಭೆ ನಡೆಸಿದ ನಂತರ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಸ್ತೂರಿ ರಂಗನ್ ಅವರು ಆಯೋಗದ ಅಧ್ಯಕ್ಷರನ್ನು ಬದಲಿಸುವಂತೆ ಪತ್ರ ಬರೆದಿದ್ದಾರೆ. ಆದರೆ ಆಯೋಗದ ಪೂರ್ಣ-ಸಮಗ್ರ ವರದಿ ನೀಡುವರೆಗೂ ಮುಂದುವರೆಯುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಜ್ಞಾನ ಆಯೋಗ ನೀಡಿರುವ ಶಿಫಾರಸುಗಳನ್ನು ಆದ್ಯತಾ ಅನುಸಾರ ಘೋಷಣೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ ಸಿಎಂ, ಕೇಂದ್ರ ಸರ್ಕಾರದ ಹೊಸ ನೀತಿಗಳ ಅನುಸಾರ ಹೆಚ್ಚು ನೆರವನ್ನು ಪಡೆಯುವ ಬಗ್ಗೆ ಅನುಕೂಲವಿರುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
ಕೆರೆ ಸಂರಕ್ಷಣೆ, ಕೃಷಿ , ನಿರುದ್ಯೋಗ ನಿವಾರಣೆ, ಕೌಶಲ್ಯಭಿವೃದ್ಧಿ ಮತ್ತಿತರ ವಿಷಯಗಳ ಬಗ್ಗೆ ಆಯೋಗ ಹಲವು ಶಿಫಾರಸುಗಳನ್ನು ನೀಡಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧ್ಯಯನ ಮಾಡಿ ಅಂತಿಮ ವರದಿ ನೀಡಲಿದೆ ಎಂದು ತಿಳಿಸಿದರು.

ಜ್ಞಾನ ಆಯೋಗದ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ 16 ಶಿಫಾರಸುಗಳನ್ನು ನೀಡಲಾಗಿದೆ. ಅದರಲ್ಲಿ 12ರನ್ನು ಸರ್ಕಾರ ಒಪ್ಪಿಕೊಂಡಿದೆ. ಮೈಸೂರಿನಲ್ಲಿ ಕಾವೇರಿ ಕಲಾ ಗ್ಯಾಲರಿ ನಿರ್ಮಾಣ, ಬೆಂಗಳೂರಿನ ಮಡಿವಾಳ ಕೆರೆಯಲ್ಲಿ ಜೀವವೈವಿಧ್ಯ ಉದ್ಯಾನವನ ನಿರ್ಮಾಣ ಸೇರಿದಂತೆ ಹಲವು ಶಿಫಾರಸುಗಳನ್ನು ನೀಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಚಿವರಾದ ಎನ್.ಮಹೇಶ್, ಬಂಡೆಪ್ಪ ಕಾಶಂಪೂರ್, ಕರ್ನಾಟಕ ಜ್ಞಾನ ಆಯೋಗದ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ಹಾಗೂ ಆಯೋಗದ ಸದಸ್ಯರು, ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ