ನಗರ ಮೂಲದ ಇ-ಕಾಮರ್ಸ್ ಸಂಸ್ಥೆಯೊಂದು ಹಣ ಹೂಡಿಕೆದಾರರಿಗೆ ಆಕರ್ಷಕ ಪ್ರತಿಫಲಗಳ ಆಮಿಷವೊಡ್ಡಿ ಕೋಟ್ಯಂತರ ರೂ.ಗಳನ್ನು ವಂಚಿಸಿದೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ

 

ಬೆಂಗಳೂರು, ಜೂ.6- ನಗರ ಮೂಲದ ಇ-ಕಾಮರ್ಸ್ ಸಂಸ್ಥೆಯೊಂದು ಹಣ ಹೂಡಿಕೆದಾರರಿಗೆ ಆಕರ್ಷಕ ಪ್ರತಿಫಲಗಳ ಆಮಿಷವೊಡ್ಡಿ ಕೋಟ್ಯಂತರ ರೂ.ಗಳನ್ನು ವಂಚಿಸಿದೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ.

ಈ ವ್ಯವಸ್ಥಿತ ವಂಚನೆ ಜಾಲ ದೇಶಾದ್ಯಂತ ವ್ಯಾಪಿಸಿದೆ ಎಂದು ಹೇಳಲಾಗಿದ್ದು, ನಗರ ವಿಭಾಗದ ಕೇಂದ್ರೀಯ ಅಪರಾಧ ತನಿಖಾ ದಳ (ಸಿಸಿಬಿ) ತನಿಖೆ ನಡೆಸುತ್ತಿದೆ.
ಈಸಿ ಪೇ ಕ್ಯಾಶ್ (ಇಪಿಸಿ) ಹೆಸರಿನ ಇ-ಕಾಮರ್ಸ್ ಸಂಸ್ಥೆಯ ಡೈರೆಕ್ಟರ್ ಚಂದ್ರಶೇಖರ ಗುಪ್ತ ಗಾಲಾ ಮುಖ್ಯ ಆರೋಪಿ. ಈ ವಂಚನೆ ನಂತರ ಕಂಪನಿಯ ಕೇಂದ್ರ ಕಚೇರಿಯನ್ನು ಬಂದ್ ಮಾಡಲಾಗಿದ್ದು, ನಿರ್ದೇಶಕ ಪರಾರಿಯಾಗಿದ್ದಾನೆ.

ವಿವರ : ಕಳೆದ ವರ್ಷ ಜೂನ್‍ನಲ್ಲಿ ಚಂದ್ರಶೇಖರ ಗುಪ್ತ ಗಾಲಾ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಈ ಕಂಪನಿ ಆರಂಭಿಸಿ, ನೆಟ್‍ವರ್ಕಿಂಗ್ ವಹಿವಾಟು ಸಂಸ್ಥೆಯ ಮುಖ್ಯಸ್ಥ ಎಂದು ಬಿಂಬಿಸಿಕೊಂಡರು. ನಂತರ ಆನ್‍ಲೈನ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಸಂಪರ್ಕಿಸಿ ಹಣ ಹೂಡಿಕೆ ಮೇಲೆ ಹೆಚ್ಚಿನ ಹಣ ನೀಡಿಕೆ ಸೇರಿದಂತೆ ಆಕರ್ಷಕ ಪ್ರತಿಫಲಗಳ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿದರು ಎಂದು ಆರೋಪಿಸಲಾಗಿದೆ.

ಪ್ರಾರಂಭದಲ್ಲಿ 9,00, 27,000 ಹಾಗೂ 81,000 ರೂ.ಗಳ ಹೂಡಿಕೆ ಮಾಡಿದರೆ ಮುಂದಿನ 20 ದಿನಗಳಲ್ಲಿ ಪ್ರತಿದಿನ ರೂ.ಗಳಿಗೆ ಕ್ರಮವಾಗಿ 100, 300 ಹಾಗೂ 1,000 ರೂ.ಗಳ ಪ್ರತಿಫಲ ನೀಡುವ ಆಶ್ವಾಸನೆ ನೀಡಿದರು. ಇದರಲ್ಲಿ ಲಾಭದಲ್ಲಿ ಮೂಲ ಬಂಡವಾಳವೂ ಸೇರಿರುತ್ತದೆ. ಹೆಚ್ಚುವರಿ ಹಣ ಹೂಡಿಕೆದಾರರನ್ನು ಈ ಯೋಜನೆಗೆ ಸೇರಿಸುವ ಪ್ರಾಥಮಿಕ ಹೂಡಿಕೆದಾರರಿಗೆ 200 ದಿನಗಳ ಕಾಲ ಪ್ರತಿದಿನ 15 ರಿಂದ 500 ರೂ.ಗಳನ್ನು ನೀಡುವ ಆಮಿಷವೊಡ್ಡಿದ್ದರು ಎಂದು ಹಣ ಕಳೆದುಕೊಂಡವರು ಆರೋಪಿಸಿದ್ದಾರೆ.
ಕ್ರಿಪೆÇ್ಟ ಕರೆನ್ಸಿಯಲ್ಲಿ ಹಣವನ್ನು ಹೂಡಿಕೆ ಮಾಡಿ ಭರ್ಜರಿ ಲಾಭ ಗಳಿಸಿ ಹೂಡಿಕೆದಾರರಿಗೆ ಹಂಚುವುದಾಗಿ ಕಂಪನಿ ಆಸೆ ಹುಟ್ಟಿಸಿತ್ತು ಎಂದು ಸಂತ್ರಸ್ತರಾದ ನದೀಮ್ ಶರೀಫ್ ಮತ್ತು ವಿನೋದ್ ನಾಯಕ್ ದೂರಿದ್ದಾರೆ.

ಡಿಜಿಟಲ್ ಪ್ರಿಂಟಿಂಗ್ ಉದ್ಯಮಿಯಾಗಿರುವ ನದೀಪ್ ಈ ಯೋಜನೆಯಲ್ಲಿ 6 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಅವರ ಕುಟುಂಬದ ಸದಸ್ಯರು ಮತ್ತು ಬಂಧುಮಿತ್ರರು ಸುಮಾರು ನಾಲ್ಕು ಕೋಟಿ ರೂ.ಗಳನ್ನು ತೊಡಗಿಸಿದ್ದು, ಈಗ ವಂಚನೆಗೆ ಒಳಗಾಗಿ ಪರಿತಪಿಸುತ್ತಿದ್ದಾರೆ. ಸಿವಿಲ್ ಎಂಜಿನಿಯರ್ ಆಗಿರುವ ವಿನೋದ್ 63,000 ರೂ.ಗಳನ್ನು ಕಳೆದುಕೊಂಡಿದ್ದಾರೆ.
ಕ್ರಿಪೆÇ್ಟ ಕರೆನ್ಸಿ ವಹಿವಾಟು ಭಾರತದಲ್ಲಿ ನಿಷೇಧ. ಆದಾಗ್ಯೂ ಈ ಯೋಜನೆಯಲ್ಲಿ ಸುಮಾರು ಎರಡು ಲಕ್ಷ ಮಂದಿ ಹಣ ತೊಡಗಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕಂಪನಿಯ ಕಚೇರಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ಧಾರೆ. ಈ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗಿದೆ. ಮುಖ್ಯ ಕಚೇರಿಯನ್ನು ಬಂದ್ ಮಾಡಿ ನಿರ್ದೇಶಕ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಡಿಸಿಪಿ ಜಿನೇಂದ್ರ ಕಣಗವಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ