ಮಾಸ್ಕೊ: ಈ ಬಾರಿಯ ವಿಶ್ವಕಪ್ ಫುಟ್ಬಾಲ್ಗೆ ಆತಿಥ್ಯ ವಹಿಸುತ್ತಿರುವ ರಷ್ಯಾ ಎಂಟು ತಿಂಗಳಿಂದ ಗೆಲುವಿನ ಹಂಬದಲ್ಲಿದೆ. ಮಂಗಳವಾರ ರಾತ್ರಿ ನಡೆದ ಅಭ್ಯಾಸ ಪಂದ್ಯದಲ್ಲೂ ತಂಡದ ಜಯದ ಆಸೆ ಈಡೇರಲಿಲ್ಲ. ಈ ಪಂದ್ಯದಲ್ಲಿ ರಷ್ಯಾ 1–1ರಿಂದ ಟರ್ಕಿ ಜೊತೆ ಡ್ರಾ ಮಾಡಿಕೊಂಡಿದೆ.
2016ರಲ್ಲಿ ಸ್ಟಾನಿಸ್ಲಾವ್ ಚರ್ಚಸೊವ್ ಅವರು ಕೋಚ್ ಆಗಿ ನೇಮಕಗೊಂಡ ನಂತರ ರಷ್ಯಾ ಐದು ಜಯ, ಆರು ಡ್ರಾ ಮತ್ತು ಒಂಬತ್ತು ಸೋಲು ಕಂಡಿದೆ. ಹೀಗಾಗಿ ವಿಶ್ವಕಪ್ನಲ್ಲಿ ತಂಡದ ಸಾಧನೆ ಬಗ್ಗೆ ಅಭಿಮಾನಿಗಳಲ್ಲಿ ಆತಂಕಮೂಡಿದೆ. ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾವನ್ನು ರಷ್ಯಾ ಎದುರಿಸಲಿದೆ.
ತಂಡದ ಸಾಮರ್ಥ್ಯದ ಬಗ್ಗೆಆತಂಕ ಬೇಡ ಎಂದಿರುವ ಕೋಚ್ ‘ಎಲ್ಲವೂ ಸದ್ಯದಲ್ಲೇ ಸರಿ ಹೋಗಲಿದೆ. ನಮ್ಮ ನೈಜ ಸಾಮರ್ಥ್ಯವನ್ನು ಸೌದಿ ಅರೇಬಿಯಾ ಎದುರಿನಪಂದ್ಯದಲ್ಲಿ ಕಾಣುವಿರಿ’ ಎಂದು ಹೇಳಿದ್ದಾರೆ.
ಜನಾಂಗೀಯ ನಿಂದನೆ ಆತಂಕ:
ಜನಾಂಗೀಯ ನಿಂದನೆಗೆ ಒಳಗಾಗುವ ಸಾಧ್ಯತೆ ಇದೆ ಎಂಬ ಆತಂಕದಿಂದಾಗಿ ಇಂಗ್ಲೆಂಡ್ ಆಟಗಾರ ಡ್ಯಾನಿ ರೋಸ್ ತಮ್ಮ ಕುಟುಂಬವನ್ನು ರಷ್ಯಾಗೆ ಕರೆದುಕೊಂಡು ಹೋಗದೇ ಇರಲು ನಿರ್ಧರಿಸಿದ್ದಾರೆ.
‘ನನಗೆ ಏನಾದರೂ ಸಂಭವಿಸಿದರೂ ಚಿಂತೆ ಇಲ್ಲ. ಆದರೆ ಕುಟುಂಬದವರಿಗೆ ತೊಂದರೆಯಾದರೆ ನೋವು ಸಹಿಸಲು ಸಾಧ್ಯವಿಲ್ಲ. ಅಹಿತಕರ ಘಟನೆಗಳು ನಡೆದರೆ ಅಭ್ಯಾಸ ಮಾಡಲು ಅಥವಾ ನೈಜ ಸಾಮರ್ಥ್ಯದಿಂದ ಆಡಲು ಆಗದು. ಆದ್ದರಿಂದ ಕುಟುಂಬದವರನ್ನು ಕರೆದುಕೊಂಡು ಹೋಗುವುದಿಲ್ಲ’ ಎಂದು ಅವರು ಹೇಳಿದರು.
ಈಚೆಗೆ ಫ್ರಾನ್ಸ್ ವಿರುದ್ಧ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯವೊಂದರ ಸಂದರ್ಭದಲ್ಲಿ ಜನಾಂಗೀಯ ನಿಂದನೆ ಮಾಡಿದ ಕಾರಣ ರಷ್ಯಾ ಫುಟ್ಬಾಲ್ ಸಂಸ್ಥೆಗೆ ಫಿಫಾ ಆಡಳಿತ ಮಂಡಳಿ ಭಾರಿ ಮೊತ್ತದ ದಂಡ ಹೇರಿತ್ತು. 2016–17ರಲ್ಲಿನಡೆದ ರಷ್ಯಾ ಕ್ರೀಡಾಕೂಟ ಸಂದರ್ಭದಲ್ಲಿ ಜನಾಂಗೀಯ ನಿಂದನೆಗೆ ಸಂಬಂಧಿಸಿದ 89 ಪ್ರಕರಣಗಳು ದಾಖಲಾಗಿದ್ದವು.
ತಂಡವಿಲ್ಲ; ರೆಫರಿಯೇ ಎಲ್ಲ
ಟಾಸ್ಕೆಂಟ್: ಉಜ್ಬೆಕಿಸ್ತಾನ ತಂಡಕ್ಕೆ ವಿಶ್ವಕಪ್ ಫುಟ್ಬಾಲ್ನಲ್ಲಿ ಪದಾರ್ಪಣೆ ಮಾಡಲು ಇನ್ನೂ ಸಾಧ್ಯವಾಗಲಿಲ್ಲ. ಆದರೆ ಈ ದೇಶದ ರೆಫರಿ ರೌಷನ್ ಇರ್ಮಟೊವ್ ಅವರನ್ನು ಅಂಗಣದಲ್ಲಿ ನೋಡಲು ಫುಟ್ಬಾಲ್ ಪ್ರಿಯರು ಕಾತರರಾಗಿದ್ದಾರೆ.
40 ವರ್ಷದ ರೌಷನ್ ಅವರು ವಿಶ್ವಕಪ್ ಫುಟ್ಬಾಲ್ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ರಫರಿಯಾಗಿ ಕಾರ್ಯನಿರ್ವಹಿಸಿದ ದಾಖಲೆ ಹೊಂದಿದ್ದಾರೆ.
‘ಈ ಬಾರಿ ಉಜ್ಬೆಕಿಸ್ತಾನ ವಿಶ್ವಕಪ್ನಲ್ಲಿ ಆಡುವುದರಿಂದ ಸ್ವಲ್ಪದರಲ್ಲೇ ವಂಚಿತವಾಗಿದೆ. ಆದರೆ 2022ರ ವಿಶ್ವಕಪ್ನಲ್ಲಿ ತಂಡ ಸ್ಥಾನ ಗಳಿಸುವ ಭರವಸೆ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.