ಕ್ವಾಲಾಲಂಪುರ: ಮೊದಲ ಎರಡು ಪಂದ್ಯಗಳಲ್ಲಿ ಪಾರಮ್ಯ ಮೆರೆದಿದ್ದ ಭಾರತ ಮಹಿಳೆಯರ ತಂಡ ಏಷ್ಯಾ ಕಪ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಮುಗ್ಗರಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದವರು ಭಾರತವನ್ನು ಏಳು ವಿಕೆಟ್ಗಳಿಂದ ಮಣಿಸಿದರು.
ಭಾರತ ತಂಡ 142 ರನ್ಗಳ ಗುರಿ ನೀಡಿತ್ತು. ಇದನ್ನು ಬಾಂಗ್ಲಾದೇಶ 19.4 ಓವರ್ಗಳಲ್ಲಿ ದಾಟಿತು. ಫರ್ಜಾನಾ ಹಕ್ ಮತ್ತು ರುಮಾನಾ ಅಹಮ್ಮದ್ ಜೋಡಿಯು ಬಾಂಗ್ಲಾದೇಶದ ಗೆಲುವಿನ ರೂವಾರಿಯಾದರು. ಇವರಿಬ್ಬರು ನಾಲ್ಕನೇ ವಿಕೆಟ್ಗೆ ಅಜೇಯ 93 ರನ್ ಸೇರಿಸಿದರು.
ಭಾರತದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 11 ರನ್ ಆಗಿದ್ದಾಗ ಸ್ಮೃತಿ ಮಂದಾನ ಔಟಾದರು. ಅವರು ಕೇವಲ ಎರಡು ರನ್ ಗಳಿಸಿದ್ದರು. ನಂತರ 15 ರನ್
ಸೇರಿಸುವಷ್ಟರಲ್ಲಿ ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್ ಕೂಡ ಔಟಾದರು. ಪೂಜಾ ವಸ್ತ್ರಕರ್ ಮತ್ತು ಹರ್ಮನ್ ಪ್ರೀತ್ ಕೌರ್ 44 ರನ್ ಜೋಡಿಸಿ ಉತ್ತಮ ಮೊತ್ತ ಸೇರಿಸುವ ಭರವಸೆ ಮೂಡಿಸಿದರು. ಅಷ್ಚರಲ್ಲಿ ಪೂಜಾ ಔಟಾಗಿ ನಿರಾಸೆ ಮೂಡಿಸಿದರು.
ಆದರೆ ಹರ್ಮನ್ ಪ್ರೀತ್ ಕೌರ್ (42; 37 ಎ, 6 ಬೌಂ) ಮತ್ತು ದೀಪ್ತಿ ಶರ್ಮಾ (32; 28 ಎ, 5 ಬೌಂ) ನಾಲ್ಕನೇ ವಿಕೆಟ್ಗೆ 50 ರನ್ ಸೇರಿಸಿ ತಂಡದ ಕೈ ಹಿಡಿದರು. ಒಂದು ರನ್ ಅಂತರದಲ್ಲಿ ಇವರಿಬ್ಬರು ಔಟಾದ ನಂತರ ಭಾರತ ದಿಢೀರ್ ಪತನ ಕಂಡಿತು. ಕೊನೆಯ ನಾಲ್ಕು ಓವರ್ಗಳಲ್ಲಿ ತಂಡಕ್ಕೆ 22 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಬಾಂಗ್ಲಾ ತಂಡ ಕೂಡ ಆರಂಭದಲ್ಲಿ ಸಂಕಷ್ಟ ಅನುಭವಿಸಿತು. 49 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದುಗೂಡಿದ ಫರ್ಜಾನಾ (52; 46 ಎ, 1 ಸಿ, 5 ಬೌಂ) ಮತ್ತು ರುಮಾನಾ (42; 34 ಎ, 6 ಬೌಂ) ಸುಲಭ ಜಯ ಗಳಿಸಿಕೊಟ್ಟರು.
ಕೊನೆಯ ನಾಲ್ಕು ಓವರ್ಗಳಲ್ಲಿ ಈ ತಂಡಕ್ಕೆ 32 ರನ್ಗಳ ಅಗತ್ಯವಿತ್ತು. ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ ವಾಡ್ ಹಾಕಿದ 17ನೇ ಓವರ್ನಲ್ಲಿ ಫರ್ಜಾನಾ 12 ರನ್ ಕಬಳಿಸಿದರು. ಜೂಲನ್ ಗೋಸ್ವಾಮಿ ಅವರ ಮುಂದಿನ ಓವರ್ನಲ್ಲಿ ರುಮಾನಾ 10 ರನ್ ಗಳಿಸಿದರು. ಹೀಗಾಗಿ ಕೊನೆಯ ಎರಡು ಓವರ್ಗಳಲ್ಲಿ ನಿರಾಳವಾಗಿ ಬ್ಯಾಟಿಂಗ್ ಮಾಡಲು ಬಾಂಗ್ಲಾ ಆಟಗಾರ್ತಿಯರಿಗೆ ಸಾಧ್ಯವಾಯಿತು. ಪಾಯಿಂಟ್ ಪಟ್ಟಿಯಲ್ಲಿ ಭಾರತ ಇನ್ನೂ ಅಗ್ರಸ್ಥಾನ ದಲ್ಲಿ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ಮತ್ತು ನಂತರ ಮಲೇಷ್ಯಾವನ್ನು ಮಣಿಸಿದ್ದ ಭಾರತ ಗುರುವಾರ ಶ್ರೀಲಂಕಾವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್ಗಳಲ್ಲಿ ಏಳು ವಿಕೆಟ್ಗಳಿಗೆ 141 (ಹರ್ಮನ್ ಪ್ರೀತ್ ಕೌರ್ 42, ದೀಪ್ತಿ ಶರ್ಮಾ 32; ರುಮಾನಾ ಅಹಮ್ಮದ್ 21ಕ್ಕೆ3); ಬಾಂಗ್ಲಾದೇಶ: 19.4 ಓವರ್ಗಳಲ್ಲಿ ಮೂರು ವಿಕೆಟ್ಗಳಿಗೆ 142 (ಫರ್ಜಾನಾ ಹಕ್ ಅಜೇಯ 52, ರುಮಾನಾ ಅಹಮ್ಮದ್ ಅಜೇಯ 42). ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ ಏಳು ವಿಕೆಟ್ಗಳ ಜಯ. ಪಂದ್ಯದ ಶ್ರೇಷ್ಠ ಆಟಗಾರ್ತಿ: ರುಮಾನಾ ಅಹಮ್ಮದ್.