ಮುಂದಿನ ರಣಜಿ ಟೂರ್ನಿಯಲ್ಲಿಯೂ ತಟಸ್ಥ ಪಿಚ್ ಕ್ಯುರೇಟರ್‌

ದೆಹಲಿ: ಮುಂಬರಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತಟಸ್ಥ ಪಿಚ್ ಕ್ಯುರೇಟರ್‌ಗಳನ್ನು  ಮುಂದುವರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.
ಹೋದ ವರ್ಷದ ಟೂರ್ನಿಯಲ್ಲಿ ತಂಡಗಳು ತಮ್ಮ ತವರಿನ ತಾಣಗಳಲ್ಲಿ ಲೀಗ್ ಹಂತದ ಪಂದ್ಯಗಳನ್ನು ಆಡುವ ಅವಕಾಶ ಪಡೆದಿದ್ದವು.
ಆದರೆ, ಪಿಚ್‌ ಕ್ಯುರೇಟರ್‌ಗಳನ್ನು ಬೇರೆ ಕ್ರಿಕೆಟ್ ಸಂಸ್ಥೆಗಳಿಂದ ಕರೆಸಲಾಗಿತ್ತು. ಈ ಕ್ರಮಕ್ಕೆ ಎಲ್ಲ ತಂಡಗಳ ನಾಯಕರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿತ್ತು.
ಮುಂಬೈನಲ್ಲಿ ಬುಧವಾರ ಮುಕ್ತಾಯವಾದ ಕ್ಯುರೇಟರ್ಸ್‌ ವಾರ್ಷಿಕ ಸಮಾವೇಶದಲ್ಲಿ ಈ ಕುರಿತು ಪ್ರಕಟಿಸಲಾಯಿತು.
‘ಹೋದ ವರ್ಷದ ಕ್ರಮಕ್ಕೆ ತಂಡಗಳ ನಾಯಕರು, ರಾಜ್ಯ ಸಂಸ್ಥೆಗಳು ಮತ್ತು ಪಂದ್ಯದ ರೆಫರಿಗಳಿಂದ ಉತ್ತಮ ಸ್ಪಂದನೆ ದೊರೆತಿತ್ತು. ಮುಂಬರಲಿರುವ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಅದೇ ಪದ್ಧತಿಯನ್ನು ಮುಂದುವರಿಸುತ್ತೇವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮೆಚ್ಚುಗೆ: ಸಮ್ಮೇಳನದಲ್ಲಿ ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
‘ಚಿನ್ನಸ್ವಾಮಿ ಕ್ರೀಡಾಂಗಣವು ಮಳೆ ನೀರು ನಿರ್ವಹಣೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದೆ. ಉಳಿದೆಲ್ಲ ಸೌಲಭ್ಯಗಳೂ ಉತ್ತಮವಾಗಿವೆ.
ಐಪಿಎಲ್ ಸಂದರ್ಭ ದಲ್ಲಿ ಕ್ರೀಡಾಂಗಣದ ಪಿಚ್‌ ಕ್ಯುರೇಟರ್‌ ಮತ್ತು ಸಿಬ್ಬಂದಿಯು  ಶ್ರೇಷ್ಠ ಕಾರ್ಯ ಮಾಡಿದೆ’ ಎಂದು ಮಂಡಳಿಯ ಪದಾಧಿ ಕಾರಿಯೊಬ್ಬರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ