ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಾರೀ ಪ್ರಮಾಣದ ಅಸಮಾದಾನಗಳು ಸ್ಫೋಟ!

ಬೆಂಗಳೂರು, ಜೂ.6- ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಾರೀ ಪ್ರಮಾಣದ ಅಸಮಾದಾನಗಳು ಸ್ಫೋಟಗೊಂಡಿವೆ. ಕೆಲ ನಾಯಕರು ನೇರವಾಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರೆ, ಇನ್ನೂ ಕೆಲವೇಡೆ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೆಲ ನಾಯಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ.
ಸಚಿವ ಸಂಪುಟದ ಆಕಾಂಕ್ಷಿಗಳಾಗಿದ್ದ ಸತೀಶ್ ಜಾರಕಿಹೊಳಿ, ತನ್ವೀರ್ ಸೇಠ್, ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ, ಬಿ.ಸಿ.ಪಾಟೀಲ್, ಎಸ್.ಆರ್.ಪಾಟೀಲ್, ಎಂ.ಟಿ.ಬಿ.ನಾಗರಾಜ್, ಅಜಯ್‍ಸಿಂಗ್, ಸಿ.ಎಸ್.ಶಿವಳ್ಳಿ ಮತ್ತಿತರ ನಾಯಕರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಇದಲ್ಲದೆ, ಸಚಿವಾಕಾಂಕ್ಷಿಗಳಾಗಿದ್ದ ಆನಂದ್‍ಸಿಂಗ್, ರಹೀಂಖಾನ್, ಲಕ್ಷ್ಮಿ ಹೆಬ್ಬಾಳ್ಕರ್, ಡಾ.ಯತೀಂದ್ರ ಮುಂತಾದವರು ಕೂಡ ನಿರಾಸೆಗೊಳಗಾಗಿದ್ದಾರೆ.

ಗುಲ್ಬರ್ಗ ಜಿಲ್ಲೆಯಿಂದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಜೇವರ್ಗಿ ಶಾಸಕ ಅಜಯ್‍ಸಿಂಗ್ ಅವಕಾಶ ವಂಚಿತರಾಗಿದ್ದಾರೆ. ಅಜಯ್‍ಸಿಂಗ್ ದೆಹಲಿಗೆ ತೆರಳಿ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಅವರಿಗೆ ಅವಕಾಶ ತಪ್ಪಿದೆ. ಇದರಿಂದ ಆಕ್ರೋಶಗೊಂಡ ಅಜಯ್ ಸಿಂಗ್ ಬೆಂಬಲಿಗರು ಟಯರ್‍ಗಳಿಗೆ ಬೆಂಕಿ ಹಚ್ಚಿ, ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಇನ್ನೂ ಬೆಳಗಾವಿ ಜಿಲ್ಲೆಯಿಂದ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ಸಚಿವರಾಗಿದ್ದರು. ರಾಜಕೀಯ ಬೆಳವಣಿಗೆಯಲ್ಲಿ ಸತೀಶ್ ಅವರನ್ನು ತೆಗೆದು ಅವರ ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ಸಚಿವರನ್ನಾಗಿ ಮಾಡಲಾಯಿತು. ಅನಂತರ ಅಸಮದಾನಗೊಂಡಿದ್ದ ಸತೀಶ್ ಜಾರಕಿಹೊಳಿ ಜೆಡಿಎಸ್‍ನತ್ತ ಮುಖ ಮಾಡಿದ್ದರು. ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಹೈಕಮಾಂಡ್ ಸತೀಶ್ ಜಾರಕಿಹೊಳಿ ಅವರಿಗೆ ಎಐಸಿಸಿ ಕಾರ್ಯದರ್ಶಿ ಸ್ಥಾನ ನೀಡಿ ಸಮಾದಾನ ಪಡಿಸಿತ್ತು.
ಮೈತ್ರಿ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ. ಸಿದ್ದರಾಮಯ್ಯ ಅವರ ಪ್ರೀತಿಗೆ ಪಾತ್ರರಾದ ರಮೇಶ್ ಜಾರಕಿಹೊಳಿ ಸಂಪುಟ ಸೇರಿದ್ದಾರೆ. ಇದರಿಂದ ಅಸಮಾದಾನಗೊಂಡ ಸತೀಶ್ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
ಇನ್ನೊಂದೆಡೆ ಮಹಿಳೆ ಮತ್ತು ಲಿಂಗಾಯಿತ ಕೋಟಾದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಂಪುಟ ಸೇರಲು ಲಾಬಿ ನಡೆಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಹೈಕಮಾಂಡ್ ಹಿರಿಯ ನಟಿ ಜಯಮಾಲ ಅವರಿಗೆ ಅವಕಾಶ ನೀಡಿದೆ. ಇದರಿಂದ ಅಸಮಾದಾನಗೊಂಡಿದ್ದರು ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಪ್ರಮಾಣವಚನಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದರು.
ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಇದ್ದರವರ ಪೈಕಿ ಹೆಚ್ಚು ರೊಚ್ಚಿದ್ದಿರುವುದು ಮಾಜಿ ಸಚಿವ ಎಂ.ಬಿ.ಪಾಟೀಲ್. ಹಿಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದ ಅವರು ಅತ್ಯಂತ ಪ್ರಭಾವಿ ಎಂದು ಗುರುತಿಸಿಕೊಂಡಿದ್ದರು. ವೀರಶೈವ ಮತ್ತು ಲಿಂಗಾಯಿತ ಧರ್ಮಕ್ಕೆ ಸಂವಿಧಾನಾತ್ಮಕ ಸ್ಥಾನ ದೊರಕಿಸಲು ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಆದರೆ ಸಂಪುಟ ಸೇರಲು ಎಂ.ಬಿ.ಪಾಟೀಲ್ ಹೆಚ್ಚು ಲಾಬಿ ಮಾಡಿದ್ದರು. ಆದರೆ ಅದು ಈಡೇರಲಿಲ್ಲ. ಬಿಜಾಪುರ ಜಿಲ್ಲೆಯಿಂದ ಎಂ.ಬಿ.ಪಾಟೀಲ್ ಬದಲಿಗೆ ಶಿವಾನಂದ ಪಾಟೀಲರಿಗೆ ಮಣೆ ಹಾಕಲಾಗಿದೆ. ಇದು ಎಂ.ಬಿ.ಪಾಟೀಲರನ್ನು ಕೆರಳಿಸಿದೆ. ಬಹಿರಂಗ ಹೇಳಿಕೆ ನೀಡಿರುವ ಅವರು ತಮಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಇನ್ನೊಂದೆಡೆ ಅವರ ಪ್ರತಿಭಟನೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹಿರಿಯ ಕಾಂಗ್ರೆಸಿಗ ಎಚ್.ವೈ.ಮೇಟಿ ಕೂಡ ಎಂ.ಬಿ.ಪಾಟೀಲ್ ಪರ ಬ್ಯಾಟಿಂಗ್ ನಡೆಸಿದ್ದು, ಸಚಿವ ಸ್ಥಾನ ಸಿಗದೆ ಇರುವ ಬಗ್ಗೆ ಅಸಮದಾನ ಹೊರ ಹಾಕಿದ್ದಾರೆ.
ಆದರೆ ಇದಕ್ಕೆ ತಿರುಗೇಟು ನೀಡಿರುವ ನೂತನ ಸಚಿವ ಶಿವಾನಂದ ಪಾಟೀಲ್ ನಾನೂ ಕೂಡ ಹಿರಿಯ ಶಾಸಕನಿದ್ದೆ, ಹಿಂದಿನ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗಲಿಲ್ಲ. ಆಗ ನಾನು ಪ್ರತಿಭಟನೆ ನಡೆಸಿರಲಿಲ್ಲ. ರಾಜಕೀಯವಾಗಿ ಕೆಲ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ವೀರಶೈವ-ಲಿಂಗಾಯಿತ ಸಮುದಾಯದಲ್ಲಿ ಪ್ರಭಾವಿ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರನ್ನು ಕೈ ಬಿಟ್ಟಿರುವುದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತ ಪಡಿಸಿ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.
ಹಾವೇರಿ ಜಿಲ್ಲೆಯ ಪ್ರಭಾವಿ ನಾಯಕ ಬಿ.ಸಿ.ಪಾಟೀಲ್ ತಮಗೆ ಸಚಿವ ಸ್ಥಾನ ನೀಡದ ಕಾಂಗ್ರೆಸ್ ನಾಯಕರ ವಿರುದ್ಧ ನೇರವಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದರಿಂದ ಮುಂದೆ ಕಾಂಗ್ರೆಸ್‍ಗೆ ಭಾರೀ ನಷ್ಟವಾಗಲಿದೆ ಎಂದು ಎಚ್ಚರಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾದಾನ ಹೊರ ಹಾಕಿದ್ದಾರೆ.
ಇನ್ನೂ ಕಾಂಗ್ರೆಸ್‍ನಲ್ಲಿ ಹಿರಿಯ ನಾಯಕರಾದ ರೋಷನ್‍ಬೇಗ್, ತನ್ವಿರ್‍ಸೆಠ್ ಮತ್ತಿತರರನ್ನು ಕೈ ಬಿಟ್ಟು ಇತ್ತೀಚೆಗಷ್ಟೆ ಕಾಂಗ್ರೆಸ್‍ಗೆ ಬಂದ ಜಮೀರ್ ಅಹಮದ್ ಖಾನ್‍ರನ್ನು ಸಚಿವರನ್ನಾಗಿ ಮಾಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರಿನಲ್ಲಿ ತನ್ವೀರ್ ಸೆಠ್ ಬೆಂಬಲಿಗರ ಪ್ರತಿಭಟನೆ ನಡೆಸಿದ್ದಾರೆ. ರೋಷನ್‍ಬೆಗ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರು ಹಾಜರಾರುವ ಮೂಲಕ ಪ್ರತಿಭಟನೆ ವ್ಯಕ್ತ ಪಡಿಸಿದ್ದಾರೆ.
ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಅವರಿಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ್ದು, ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಹಿರಿಯ ನಾಯಕರ ಜತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಏಳು ಬಾರಿ ಶಾಸಕರಾಗಿರುವ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನ ತಪ್ಪಿದ್ದಕ್ಕೆ ಸಿಟ್ಟಾಗಿದ್ದಾರೆ.
ಕುರುಬ ಸಮುದಾಯದ ಹಿರಿಯ ಶಾಸಕರಾದ ಎಂ.ಟಿ.ಬಿ.ನಾಗರಾಜ್ ನಾನು ಮೂರು ಬಾರಿ ಗೆದ್ದಿರುವುದು ವೈಯಕ್ತಿಕ ವರ್ಚಸ್ಸಿನಿಂದಲೇ ಹೊರತು ಕಾಂಗ್ರೆಸ್ ಹೆಸರಿನಿಂದ ಅಲ್ಲ ಎಂದು ಬಹಿರಂಗ ಹೇಳಿಕೆ ನೀಡಿ, ಸೆಟೆದು ನಿಂತಿದ್ದಾರೆ.
ಕುರುಬ ಸಮುದಾಯದ ಇನ್ನೊರ್ವ ಪ್ರಭಾವಿ ನಾಯಕ ಎಚ್.ಎಂ.ರೇವಣ್ಣ ತಮಗೆ ಸಚಿವ ಸ್ಥಾನ ಕೈ ತಪ್ಪಲು ಕಾಣದ ಶಕ್ತಿಗಳ ಕೈವಾಡವಿದೆ ಎಂದಿದ್ದಾರೆ. ಕುರುಬ ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಷಡ್ಯಂತ್ರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸರ್ಕಾರದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಮತ್ತು ಲಂಬಾಣಿ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ. ಲಂಬಾಣಿ ಸಮುದಾಯದ ಪಿ.ಟಿ.ಪರಮೇಶ್ವರ್ ನಾಯಕ್ ಪ್ರಬಲ ಆಕಾಂಕ್ಷಿಯಾಗಿ ಲಾಬಿ ನಡೆಸಿದ್ದರು.
ಇನ್ನೂ ಹೈಕಮಾಂಡ್ ಮಟ್ಟದಲ್ಲಿ ಅತ್ಯಂತ ಆಪ್ತರಾದ ಕೆ.ಎಚ್.ಮುನಿಯಪ್ಪ ತಮ್ಮ ಪುತ್ರಿ ರೂಪ ಶಶಿಧರ್‍ಗೆ ಸಚಿವ ಸ್ಥಾನ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಎಡಗೈ ಸಮುದಾಯಕ್ಕೆ ಅವಕಾಶ ಸಿಗದಂತಾಗಿದೆ.
ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಪುತ್ರ ಯತೀಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸಲು ಲಾಬಿ ನಡೆಸಿದ್ದರಾದರೂ ಆ ಪ್ರಯತ್ನ ಕೈಗೂಡಿಲ್ಲ.
ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಸುಧಾಕರ್, ವಿ.ಮುನಿಯಪ್ಪ, ಧಾರವಾಡದ ಉಮೇಶ್ ಜಾದವ್, ಬಳ್ಳಾರಿ ನಾಗೆಂದ್ರ, ಚಿತ್ರದುರ್ಗದ ಟಿ.ರಘುಮೂರ್ತಿ, ಚಾಮರಾಜನಗರದ ಆರ್.ನರೇಂದ್ರ ಅವರ ಹೆಸರು ಸಂಪುಟ ಸೇರುವವರ ಪಟ್ಟಿಯಲ್ಲಿದ್ದರೂ ಕೊನೆ ಕ್ಷಣದಲ್ಲಿ ಬದಲಾಗಿರುವುದು ಅಸಮಾದಾನಕ್ಕೆ ಕಾರಣವಾಗಿದೆ. ಪ್ರಬಲ ಆಕಾಂಕ್ಷಿಗಳಾಗಿದ್ದರು. ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಕಾಂಗ್ರೆಸ್‍ನಲ್ಲಿ ಭಿನ್ನಮತದ ಹೊಗೆಯಾಡತೊಡಗಿದೆ.
ಜೆಡಿಎಸ್‍ನಲ್ಲೂ ಅತೃಪ್ತಿ:
ಜೆಡಿಎಸ್ ಪಕ್ಷದಲ್ಲೂ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ.
ಶಾಸಕ ಎಂ.ಸಿ.ಮನಗೋಳಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅವರ ಬೆಂಬಲಿಗರು ದೇವೇಗೌಡರ ನಿವಾಸದೆದುರು ಪ್ರತಿಭಟನೆ ನಡೆಸಿದರು.
ಜೆಡಿಎಸ್ ಹಿರಿಯ ವರಿಷ್ಠರು ಬಂಡಾಯ ಶಮನ, ಅತೃಪ್ತರ ಮನವೊಲಿಕೆ ಯತ್ನ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ