ಮುಂಬೈ, ಜೂ.4- ಒಟಿಪಿ ನಂಬರ್ ಪಡೆದು ನಿಮ್ಮ ಖಾತೆಗೆ ಕನ್ನ ಹಾಕುವವರಿದ್ದರೆ, ನಿಮ್ಮ ಬ್ಯಾಂಕ್ನ ಖಾತೆಯ ನಂಬರ್ ಅಥವಾ ಒಟಿಪಿ ನಂಬರ್ ಅನ್ನು ನಮ್ಮ ಬ್ಯಾಂಕ್ ಕೇಳುವುದಿಲ್ಲ, ಒಂದು ವೇಳೆ ಇಂತಹ ಕರೆಗಳು ಬಂದರೆ ಎಚ್ಚರಿಕೆಯಿಂದಿರಿ ಎಂದು ಎಚ್ಚರಿಕೆ ಸಂದೇಶಗಳನ್ನು ರವಾನಿಸುತ್ತಿದ್ದರೂ ಕೂಡ ಮುಂಬೈನ ಮಹಿಳೆಯೊಬ್ಬರು ತಮ್ಮ ಒಟಿಪಿ ನಂಬರ್ ಅನ್ನು ವಿನಿಮಯ ಮಾಡಿ 7 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ನವಿ ಮುಂಬೈನ ತಸ್ನೀಮ್ ಮುಜ್ಕರ್ ಮೋದಕ್ (40) ವಂಚನೆಗೊಳಗಾದಮಹಿಳೆ.
ಘಟನೆ ಹಿನ್ನೆಲೆ :
ಕಳೆದ ಮೇ 17 ರಂದು ಅನಾಮಧೇಯರು ಮೋದಕ್ಗೆ ಕರೆ ಮಾಡಿ, ನಾವು ನಿಮ್ಮ ಖಾತೆ ಹೊಂದಿರುವ ಬ್ಯಾಂಕ್ನಿಂದ ಕರೆ ಮಾಡುತ್ತಿದ್ದೇವೆ, ಕೆಲವು ತಾಂತ್ರಿಕ ದೋಷಗಳಾಗಿರುವುದರಿಂದ ನಿಮ್ಮ ಖಾತೆಯನ್ನು ಚಾಲ್ತಿಗೊಳಿಸಲು ನಿಮ್ಮ ಡೆಬಿಟ್ ಕಾರ್ಡ್ ನಂಬರ್ ಹಾಗೂ ಅದಕ್ಕೆ ಸಂಬಂಧಿಸಿದ ಒಟಿಪಿ ನಂಬರ್ ನೀಡಿ ಎಂದು ಕೇಳಿದ್ದಾರೆ.
ಈ ಕರೆಯಿಂದ ಅನುಮಾನಗೊಳ್ಳದ ತಸ್ನೀಮ್ ಅವರು ತಮ್ಮ ಬ್ಯಾಂಕ್ ಖಾತೆ, ಡೆಬಿಟ್ ಹಾಗೂ ಒಟಿಪಿ ನಂಬರ್ನ ಮಾಹಿತಿಯನ್ನು ನೀಡಿದ್ದಾರೆ, ಇದೇ ರೀತಿ ವಾರದಲ್ಲಿ 28 ಸಲ ಅದೇ ನಂಬರ್ನಿಂದ ಕರೆ ಬಂದರೂ ತಸ್ನೀಮ್ ಬ್ಯಾಂಕ್ ಮ್ಯಾನೇಜರ್ ಅನ್ನು ಸಂಪರ್ಕಿಸದ ಕಾರಣ ಇತ್ತೀಚೆಗೆ ಪರೀಕ್ಷಿಸಿದಾಗ ಆಕೆಯ ಖಾತೆಯಿಂದ ವಂಚಕರು 7 ಲಕ್ಷ ರೂ.ಗಳನ್ನು ಡ್ರಾ ಮಾಡಿರುವುದನ್ನು ತಿಳಿದು ಗಾಬರಿಗೊಂಡಿದ್ದಾರೆ.
ಈ ಸಂಬಂಧ ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ತಸ್ನೀಮ್ ದೂರು ನೀಡಿದ್ದಾರೆ.
ಈ ಸಂಬಂಧ ಅಪರಾಧ ಇನ್ಸ್ಪೆಕ್ಟರ್ ಬಿ.ಎನ್.ಆ್ಯಂಟು ಸುದ್ದಿಗಾರರೊಂದಿಗೆ ಮಾತನಾಡಿ, ಗೌಪ್ಯವಾಗಿ ಇಡಬೇಕಾಗಿದ್ದ ಮಾಹಿತಿಯನ್ನು ಮೋದಕ್ ಅವರು ಬಹಿರಂಗಪಡಿಸಿದ್ದರಿಂದಲೇ ವಂಚಕರು ಮುಂಬೈ, ನೋಯಿಡಾ, ಗುರ್ಗ್ರಾಮ್, ಕೋಲ್ಕತ್ತಾ, ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 7 ಲಕ್ಷ ರೂ.ಗಳನ್ನು ಡ್ರಾ ಮಾಡಿದ್ದು ಆದಷ್ಟು ಬೇಗ ಅವರ ಬಂಧನಕ್ಕೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.