ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಇಲ್ಲ; ಸರ್ಕಾರ ಸ್ಥಿರವಾಗಿರುತ್ತದೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

 

ಬೆಂಗಳೂರು, ಜೂ.4- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲ, ಸಮಸ್ಯೆ, ಭಿನ್ನಾಭಿಪ್ರಾಯಗಳಿಲ್ಲ. ಸರ್ಕಾರ ಸ್ಥಿರವಾಗಿರುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷಗಳ ಕಾಲ ಸರ್ಕಾರ ಮುಂದುವರೆಯಲಿದೆ. ಅಧಿಕಾರ ಹೋಗುತ್ತೆ ಎಂಬ ಚಿಂತೆಯಿಲ್ಲ. ಮಾಧ್ಯಮಗಳಲ್ಲಿ ಆಧಾರ ರಹಿತ ಸುದ್ದಿಗಳು ಬಿತ್ತರವಾಗುತ್ತಿವೆ. ತಾವು ಸಿಎಂ ಆದ ನಂತರ ಯಾವುದೇ ಹೊಸ ಕಾರು ಖರೀದಿಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರೈತರು ಸೇರಿದಂತೆ ಯಾರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬಾರದು. ಬದುಕಿನ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಬೇಕು. ಕಳೆದೊಂದು ವಾರದಲ್ಲಿ 20 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಇರುವುದು ನಾಡಿನ ಜನರಿಗಾಗಿ ಹೊರತು ಅಧಿಕಾರಕ್ಕಾಗಿ ಅಲ್ಲ. ಯಾವುದೇ ಕಾರಣಕ್ಕೂ ರಾಜಿಗೆ ಒಳಗಾಗುವುದಿಲ್ಲ ಎಂದರು.
ಕಳೆದ 10 ವರ್ಷದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆಡಳಿತದಲ್ಲಿನ ಲೋಪದೋಷ, ನೂನ್ಯತೆ ಸರಿಪಡಿಸಬೇಕಿದೆ. ಚುನಾವಣೆ ಪೂರ್ವದಲ್ಲಿ ನಾಡಿನ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಬದ್ಧವಾಗಿರುವುದಾಗಿ ತಿಳಿಸಿದರು.
ಜನರಿಗೆ ತಮ್ಮ ಮನೆ 24 ಗಂಟೆಯೂ ಬಾಗಿಲು ತೆರೆದಿರುತ್ತದೆ. ವಿಧಾನಸೌಧದ 3ನೇ ಮಹಡಿಯಲ್ಲಿ ಕೂಡ ಸಿಎಂ ಕಚೇರಿ ನಾಡಿನ ಜನರಿಗಾಗಿ ಸೇವೆ ಮಾಡಲು ಸಿದ್ದವಿದ್ದು, ಜನರಿಗೆ ಮುಕ್ತ ಅವಕಾಶವಿದೆ ಎಂದರು.

ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಹಾಗೂ ನ್ಯಾಷನಲ್ ಕಾಲೇಜು ಹೆಸರು ಉಳಿಸುವ ನಿಟ್ಟಿನಲ್ಲಿ ಜನಸೇವೆ ಹಾಗೂ ಆಡಳಿತ ಮಾಡುವುದಾಗಿ ಭರವಸೆ ನೀಡಿದರು. ಮುಂದಿನ 5 ವರ್ಷದಲ್ಲಿ ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡುವ ಉದ್ದೇಶವಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದು, ತಾವು ಸಾಂದರ್ಭಿಕ ಶಿಶು ಎಂಬುದನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು.
ನಾಡಿನ ಜನತೆ ತಮ್ಮ ಪಕ್ಷಕ್ಕೆ ಪೂರ್ಣ ಬಹುಮತ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಬೆಂಬಲದಿಂದ ಸರ್ಕಾರ ನಡೆಯುತ್ತಿದ್ದು, ಅವರ ಮುಲಾಜಿನಲ್ಲಿರುವುದಾಗಿ ಹೇಳಿದ್ದೇನೆ ಎಂದು ಪುನರುಚ್ಚರಿಸಿದರು.

ತಮಗೆ ಯಾವುದೇ ಟೆನ್ಷನ್ ಇಲ್ಲ. ದೇವರು ನಂಬಿ ಬದುಕುತ್ತಿದ್ದು, ದೇವರು ಕೊಟ್ಟಿರುವ ಈ ಅವಕಾಶವನ್ನು ನಾಡಿನ ಜನಸೇವೆಗಾಗಿ ಮುಡುಪಿಟ್ಟಿರುವುದಾಗಿ ಅವರು ಹೇಳಿದರು.
ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಪೂರ್ವನಿಗದಿಯಂತೆ ಬುಧವಾರ ನಡೆಯುತ್ತೆ, ಅನುಮಾನ ಬೇಡ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎಸ್.ರಾಮರಾವ್, ಗೌರವ ಕಾರ್ಯದರ್ಶಿ ನಾಗರಾಜರೆಡ್ಡಿ, ಖಜಾಂಚಿ ಜಯಚಂದ್ರ ಶೆಟ್ಟಿ, ನ್ಯಾಷನಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಆರ್.ಪರಿಣಿತ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕುಮಾರಿ, ಹಿರಿಯ ಪೆÇಲೀಸ್ ಅಧಿಕಾರಿ ಭಾಸ್ಕರ್ ರಾವ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ