ಶಿಲ್ಲಾಂಗ್: ಶಿಲ್ಲಾಂಗ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ದುಷ್ಕರ್ಮಿಗಳ ಗುಂಪು ಕಳೆದ ನಾಲ್ಕು ದಿನಗಳಿಂದ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲಿ ಸೋಮವಾರವೂ ಕರ್ಫ್ಯೂ ಮುಂದುವರೆಸಲಾಗಿದೆ.
ಶಿಲ್ಲಾಂಗ್ ನಲ್ಲಿಇಂದು ಸಂಜೆ ನಾಲ್ಕು ಗಂಟೆಯಿಂದ ನಾಳೆ ಸಂಜೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಪೂರ್ವ ಖಾಶಿ ಹಿಲ್ಸ್ ಸಹಾಯಕ ಪೊಲೀಸ್ ಆಯುಕ್ತ ಪೀಟರ್ ಎಸ್ ಧಾಕರ್ ಅವರು ಹೇಳಿದ್ದಾರೆ.
ಕೆಲ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು, ಮೊಬೈಲ್ ಇಂಟರ್ ನೆಟ್ ಹಾಗೂ ಅಕ್ರಮವಾಗಿ ಡೀಸೆಲ್ ಮತ್ತು ಪೆಟ್ರೋಲ್ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಗುರುವಾರ ಮಧ್ಯಾಹ್ನ ಥೆಮ್ ಮೆಟೋರ್ ಪ್ರದೇಶದ ನಿವಾಸಿಗಳು ಬಸ್ ಕ್ಲೀನರ್ ಮೇಲೆ ಹಲ್ಲೆ ನಡೆಸಿರುವ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ನಂತರ ಗಲಭೆ ಆರಂಭವಾಗಿತ್ತು. ಗಲಭೆಯಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದು, ಐದು ವಾಹನಗಳಿಗೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಈಗ ಹಿಂಸಾಚಾರಕ್ಕೆ ತಿರುಗಿದ್ದು ಹಲವು ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ.