ಬೆಂಗಳೂರು:ಜೂ-4: ನಟ, ರಾಜಕಾರಣಿ ಕಮಲ್ ಹಾಸನ್ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಕಮಲ್ ಹಾಸನ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚೆ ನಡೆಸಿದ ಬಳಿಕ ಜಂಟಿಯಾಗಿ ಇಬ್ಬರೂ ಮಾತನಾಡಿದರು.
ಈ ವೇಳೆ ಮಾತನಾಡಿದ ಕಮಲ್ ಹಾಸನ್, ನಾವು ಎರಡೂ ರಾಜ್ಯಗಳು ಸಹೋದರತ್ವದಿಂದ ಬಾಳಬೇಕಾಗಿದೆ. ನಾನು ಸರ್ಕಾರದ ಪ್ರತಿನಿಧಿಯಾಗಿ ಕರ್ನಾಟಕಕ್ಕೆ ಬಂದಿಲ್ಲ, ಜನರ ಪ್ರತಿನಿಧಿಯಾಗಿ ಬಂದಿದ್ದೇನೆ. ಅಷ್ಟೇ ಅಲ್ಲ ಕುರುವೈ ಬೆಳೆಗೆ ನೀರು ಕೇಳಲು ಬಂದಿದ್ದೇನೆ. ನನಗೆ ಈ ಸಂದರ್ಭದಲ್ಲಿ ಸಿನಿಮಾಗಿಂತ ಕಾವೇರಿ ವಿಷಯವೇ ತುಂಬಾ ಮುಖ್ಯ ಎಂದು ಹೇಳಿದರು.
ಕಾವೇರಿ ನಾವು ಹುಟ್ಟುವ ಮೊದಲೇ ಇತ್ತು. ಆದರೆ ನಾವೀಗ ಕಚ್ಚಾಡಿಕೊಳ್ಳುತ್ತಿದ್ದೇವೆ. ಈ ವಿಚಾರವನ್ನು ಎರಡೂ ರಾಜ್ಯಗಳ ರೈತರೇ ಬಗೆಹರಿಸಿಕೊಳ್ಳಬೇಕು. ನಮ್ಮ ಕೊನೆಯ ಆಯ್ಕೆ ಕೋರ್ಟ್ ಆಗಿರಬೇಕಿತ್ತು. ಆದರೆ ಈಗಾಗಲೇ ಪ್ರಕರಣ ಕೋರ್ಟ್ನಲ್ಲಿದೆ. ತಮಿಳುನಾಡು ಜನತೆಗಾಗಿ ಕರ್ನಾಟಕ-ತಮಿಳುನಾಡು ಸರ್ಕಾರಗಳ ನಡುವೆ ಮಧ್ಯಸ್ಥಿಕೆಗೆ ನಾನು ಸಿದ್ದ. ನಾವು ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಾಗಿದೆ ಎಂದರು.
ರಜನಿಕಾಂತ್ ನಟಿಸಿರುವ ಕಾಲ ಚಿತ್ರ ವಿವಾದದ ಬಗ್ಗೆ ನಾವು ಯಾವುದೇ ಚರ್ಚೆ ಮಾಡಿಲ್ಲ. ಅದಕ್ಕಾಗಿ ವಾಣಿಜ್ಯ ಮಂಡಳಿ ಇದೆ. ಅವರು ನೋಡಿಕೊಳ್ಳುತ್ತಾರೆ. ನಾನು ತಮಿಳುನಾಡು ಜನತೆಯ ಪರವಾಗಿ ಬಂದಿದ್ದೇನೆ ಅಷ್ಟೇ ಎಂದು ಹೇಳಿದರು.
ಸಿಎಂ ಕುಮಾರಸ್ವಾಮಿ ಮಾತನಾಡಿ, ಎರಡೂ ರಾಜ್ಯಗಳ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.ಉಭಯ ರಾಜ್ಯಗಳ ನಡುವೆ ಸೌಹಾರ್ದತೆ ಇರಬೇಕು. ಎರಡೂ ರಾಜ್ಯಗಳು ಸಹೋದರ ಭಾವನೆಯಲ್ಲಿರಬೇಕು. ಈ ನಿಟ್ಟಿನಲ್ಲಿಯೇ ನಮ್ಮಿಬ್ಬರ ಚರ್ಚೆ ನಡೆದಿದೆ. ನಮ್ಮ ರೈತರು, ತಮಿಳುನಾಡಿನ ರೈತರೂ ಬದುಕಬೇಕು. ಸೌಹಾರ್ದಯುತವಾಗಿ ಈ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.