
ಬೆಂಗಳೂರು, ಜೂ.3- ಸಂಪುಟ ಸೇರುವವರ ಹೆಸರನ್ನು ಅಖೈರುಗೊಳಿಸಲು ಕಾಂಗ್ರೆಸ್ ನಾಯಕರು ನಾಳೆ ದೆಹಲಿ ಯಾತ್ರೆ ಕೈಗೊಳ್ಳುತ್ತಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎರಡೂ ಪಕ್ಷಗಳ ನಡುವೆ ಖಾತೆ ಹಂಚಿಕೆಯಾಗಿವೆ. ಆದರೆ ಉಭಯ ಪಕ್ಷಗಳಲ್ಲಿ ಸಚಿವರಾಗುವವರು ಯಾರು ಎಂಬ ತೀರ್ಮಾನ ಇನ್ನೂ ಅಂತಿಮವಾಗಿಲ್ಲ.
ಜೆಡಿಎಸ್‍ನಲ್ಲಿ ಸಚಿವರಾಗುವವರನ್ನು ಸ್ಥಳೀಯವಾಗಿ ನಿರ್ಧಾರ ಮಾಡಲಾಗುತ್ತದೆ. ಆದರೆ ಕಾಂಗ್ರೆಸ್‍ನಲ್ಲಿ ಹೈಕಮಾಂಡ್ ಅನುಮತಿ ಅಗತ್ಯ. ಈಗಾಗಲೇ ಸಂಭವನೀಯ ಸಚಿವರು ಹಾಗೂ ಖಾತೆಗಳ ಹಂಚಿಕೆ ಪಟ್ಟಿ ಸಿದ್ದಗೊಂಡಿದೆ. ರಾಜ್ಯ ನಾಯಕರು ಅದನ್ನು ಪರಿಶೀಲಿಸಿದ್ದು, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ದೆಹಲಿಗೆ ಕೊಂಡೊಯ್ದಿದ್ದಾರೆ.
ವಿದೇಶಿ ಪ್ರವಾಸದಲ್ಲಿರುವ ರಾಹುಲ್‍ಗಾಂಧಿ ನಾಳೆ ದೆಹಲಿಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ನಾಯಕರು ನಾಳೆ ದೆಹಲಿಗೆ ತೆರಳಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್‍ಗುಂಡೂರಾವ್, ಎಸ್.ಆರ್.ಪಾಟೀಲ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಕೆ.ಎಚ್.ಮುನಿಯಪ್ಪ ಮತ್ತಿತರರು ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.
ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ ಸೇರಿದಂತೆ ಹಿರಿಯರು ಹಾಗೂ ಎರಡಕ್ಕೂ ಹೆಚ್ಚು ಬಾರಿ ಸಚಿವರಾಗಿರುವವರನ್ನು ಸಂಪುಟದಿಂದ ಹೊರಗಿಟ್ಟು ಪಕ್ಷ ಸಂಘಟನೆಗೆ ತೊಡಗಿಸಬೇಕು ಎಂಬ ಚಿಂತನೆ ಇದೆ. ಆದರೆ ಅದಕ್ಕೆ ಇನ್ನೂ ಹೈಕಮಾಂಡ್‍ನ ಅಂಕಿತ ಸಿಕ್ಕಿಲ್ಲ.
ನಾಳೆ ದೆಹಲಿಯಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ಸಚಿವರ ಪಟ್ಟಿ ಅಂತಿಮಗೊಳ್ಳಲಿದೆ. 78 ಶಾಸಕರ ಪೈಕಿ ಸುಮಾರು 40ಕ್ಕೂ ಹೆಚ್ಚು ಮಂದಿ ಹಿರಿಯರಿದ್ದು, ಎಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಹೊಸಬರ ಪೈಕಿ ಬಹಳಷ್ಟು ಮಂದಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಅವಕಾಶ ಸಿಗದಿದ್ದರೆ ಬಿಜೆಪಿ ಈಗಾಗಲೇ ತೋರಿಸಿರುವ ಆಮಿಷದ ಬಗ್ಗೆ ಪರಿಶೀಲನೆ ಮಾಡುವ ಕುರಿತು ಬೆದರಿಕೆ ಹಾಕಿದ್ದಾರೆ.
ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಅತ್ಯಂತ ನಾಜೂಕಿನ ಹೆಜ್ಜೆಯನ್ನಿಡುವ ಅಗತ್ಯವಿದೆ. ಈಗಾಗಲೇ ಕಾಂಗ್ರೆಸ್ ವಲಯದಲ್ಲಿ ಬೇಗುದಿಗಳು ಹೊಗೆಯಾಡುತ್ತಿದ್ದು, ಯಾವ ಕ್ಷಣದಲ್ಲಿ ಯಾವ ಸ್ಫೋಟ ಸಂಭವಿಸಲಿದೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ.
ಈ ವೇಳೆ ಸಂಪುಟ ವಿಸ್ತರಣೆಯಲ್ಲಿ ಮತ್ತಷ್ಟು ಅಧ್ವಾನಗಳಾದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ರಾಹುಲ್‍ಗಾಂಧಿ ಸಮ್ಮುಖದಲ್ಲಿ ಸಭೆ ನಡೆಸಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ.
ಕೆ.ಸಿ.ವೇಣುಗೋಪಾಲ್ ಸಮ್ಮುಖದಲ್ಲಿ ನಡೆದ ಹಲವು ಸುತ್ತಿನ ಸಭೆಗಳಲ್ಲಿಯೇ ಸಚಿವ ಸ್ಥಾನದ ಆಕಾಂಕ್ಷಿಗಳ ಬಗ್ಗೆ ಚರ್ಚೆಯಾಗಿದ್ದವು. ಬಹುತೇಕ ಬೆಂಗಳೂರಿನಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತಾದರೂ ಕೊನೆ ಕ್ಷಣದಲ್ಲಿ ರಾಜ್ಯ ನಾಯಕರು ಮನಸ್ಸು ಬದಲಾಯಿಸಿದ್ದಾರೆ. ನಾಳೆ ಹೆಚ್ಚು, ಕಡಿಮೆಯಾದರೆ ನಾವು ಹೊಣೆ ಹೊರುವುದು ಬೇಡ ಎಂಬ ಕಾರಣಕ್ಕಾಗಿ ರಾಹುಲ್‍ಗಾಂಧಿಯವರ ಸಮ್ಮುಖದಲ್ಲೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಹೀಗಾಗಿ ನಾಳೆ ಹಿರಿಯ ನಾಯಕರು ದೆಹಲಿಗೆ ತೆರಳುತ್ತಿದ್ದು, ಅವರ ಜೊತೆ ಸಚಿವ ಸ್ಥಾನದ ಆಕಾಂಕ್ಷಿಗಳು ಕೂಡ ದೆಹಲಿಗೆ ದಾಂಗುಡಿ ಇಡುತ್ತಿದ್ದಾರೆ.