ಜೆಡಿಎಸ್‍ಗೆ ಐದು ವರ್ಷ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದು ಹೈಕಮಾಂಡ್ ನಿರ್ಧಾರ; ಇದರಲ್ಲಿ ಅಸಮಾಧಾನವಿಲ್ಲ: ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ

 

ಬೆಂಗಳೂರು, ಜೂ.3-ಜೆಡಿಎಸ್‍ಗೆ ಐದು ವರ್ಷ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದು ಹೈಕಮಾಂಡ್ ನಿರ್ಧಾರ. ಅದರ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಇಲ್ಲದೆ ಇರುವುದನ್ನು ಸೃಷ್ಟಿ ಮಾಡಿಕೊಂಡು ವದಂತಿ ಹಬ್ಬಿಸುತ್ತಿವೆ. ನನ್ನ ಮತ್ತು ವೇಣುಗೋಪಾಲ್ ನಡುವೆ ಯಾವುದೇ ಅಸಮಾಧಾನಗಳಿಲ್ಲ. ಪಕ್ಷದಲ್ಲಿ ಎಲ್ಲ ಚರ್ಚಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಜೆಡಿಎಸ್‍ಗೆ ಐದು ವರ್ಷ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದು ಹೈಕಮಾಂಡ್‍ನ ನಿರ್ಧಾರ. ಅದನ್ನು ನಾವೆಲ್ಲರೂ ಗೌರವಿಸುತ್ತೇವೆ. ಯಾರೋ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬುದು ಸುಳ್ಳು ವದಂತಿಯಷ್ಟೆ ಎಂದರು.

ಎಸ್.ಆರ್.ಪಾಟೀಲ್ ರಾಜೀನಾಮೆಗೆ ಪತ್ರಿಕ್ರಿಯಿಸಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರಿಗೆ ಪತ್ರ ಬರೆದು ಎಸ್.ಆರ್.ಪಾಟೀಲ್ ರಾಜೀನಾಮೆ ನೀಡಿದ್ದಾರೆ ಎಂದಷ್ಟೇ ಗೊತ್ತಿದೆ. ರಾಜೀನಾಮೆ ಪತ್ರದಲ್ಲಿ ಏನೆಲ್ಲ ಅಂಶಗಳಿವೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ರಾಜೀನಾಮೆ ಪತ್ರದ ಬಗ್ಗೆ ರಾಹುಲ್‍ಗಾಂಧಿ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಎಸ್.ಆರ್.ಪಾಟೀಲ್ ಕಾಂಗ್ರೆಸ್‍ನ ಅತ್ಯಂತ ಹಿರಿಯ ಮತ್ತು ನಿಷ್ಠಾವಂತ ಮುಖಂಡ. ಅವರಿಗೆ ಅಸಮಾಧಾನವಾಗಿದೆ. ಚರ್ಚೆ ಮಾಡಿ ಬಗೆಹರಿಸುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ