ಬಿಡಿಎಯಿಂದ ನಿರ್ಮಿಸಿದ್ದ ಏಳು ವಾಣಿಜ್ಯ ಸಂಕೀರ್ಣ ತೆರವು

 

ಬೆಂಗಳೂರು, ಜೂ.3-ಬೆಂಗಳೂರಿನಲ್ಲಿ 30 ವರ್ಷಗಳ ಹಿಂದೆ ಬಿಡಿಎಯಿಂದ ನಿರ್ಮಿಸಿದ್ದ ಏಳು ವಾಣಿಜ್ಯ ಸಂಕೀರ್ಣಗಳನ್ನು ಕೆಡವಿ ಹೊಸದಾಗಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಹಳೆಯ ಕಟ್ಟಡಗಳಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಬಿಡಿಎ ವತಿಯಿಂದ 11 ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗಿತ್ತು. ಅವುಗಳಲ್ಲಿ ಇಂದಿರಾನಗರ, ಆರ್.ಟಿ.ನಗರ, ಆಸ್ಟೀನ್‍ಟೌನ್, ಕೋರಮಂಗಲ, ವಿಜಯನಗರ ಮತ್ತು ಸದಾಶಿವನಗರ ವಾಣಿಜ್ಯ ಸಂಕೀರ್ಣಗಳು ಸುಮಾರು 30 ವರ್ಷ ಹಳೆಯದ್ದಾಗಿವೆ. ಎಚ್.ಎಸ್.ಆರ್. ಬಡಾವಣೆಯ ವಾಣಿಜ್ಯ ಸಂಕೀರ್ಣ 13 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈ ಏಳೂ ವಾಣಿಜ್ಯ ಸಂಕೀರ್ಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ( ಪಿಪಿಪಿ ಮಾಡಲ್)ಪುನರ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

30 ವರ್ಷಗಳ ಹಿಂದೆ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವಾಗ ಆಗಿನ ನಿಯಮಾವಳಿಗಳಿಗೆ ಅನುಸಾರವಾಗಿ ಎಫ್‍ಎಆರ್ ಜಾಗವನ್ನು ಬಿಡಲಾಗಿತ್ತು. ಈಗಿನ ನಿಯಮಾವಳಿಯಂತೆ ಎಫ್‍ಎಆರ್ ಜಾಗ ಇನ್ನೂ ಹೆಚ್ಚಾಗಿ ಬಿಡುವ ಅಗತ್ಯವಿದೆ. ಎಫ್‍ಎಆರ್ ಸ್ಥಳವನ್ನು ಹೆಚ್ಚು ಮಾಡಬೇಕಾದರೆ ಕಟ್ಟಡಗಳ ಪುನರ್ ನವೀಕರಣ ಅನಿವಾರ್ಯವಾಗಿದೆ.

ಬಹಳಷ್ಟು ಕಟ್ಟಡಗಳು ಹಳೆಯದ್ದಾಗಿದ್ದು, ವರ್ಷಕ್ಕೆ 5 ಕೋಟಿಗಿಂತಲೂ ಹೆಚ್ಚಿನ ನಿರ್ವಹಣಾ ವೆಚ್ಚ ತಗುಲುತ್ತಿದೆ. ಇದು ವಾಣಿಜ್ಯ ಸಂಕೀರ್ಣಗಳಿಂದ ಬರುವ ಆದಾಯಕ್ಕೆ ಸರಿಸಮಾನವಾಗಿದ್ದು, ಬಿಡಿಎಗೆ ಯಾವುದೇ ಲಾಭವಾಗುತ್ತಿಲ್ಲ.

ಈ ಎಲ್ಲಾ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಸೆಟ್‍ಬ್ಯಾಕ್ ಜಾಗದಲ್ಲಿಯೇ ವಾಹನ ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ನಗರದ ಹೃದಯ ಭಾಗದಲ್ಲಿರುವ ಜಾಗಗಳಲ್ಲಿ ವಾಣಿಜ್ಯ ಸಂಕೀರ್ಣಗಳಿದ್ದರೂ ಗರಿಷ್ಠ ಮಟ್ಟದಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಅತ್ಯಾಧುನಿಕ ಮತ್ತು ಸುಸಜ್ಜಿತವಾದ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಬಿಡಿಎ ಉದ್ದೇಶಿಸಿದೆ.

ಪುನರ್ ನಿರ್ಮಿತ ವಾಣಿಜ್ಯ ಸಂಕೀರ್ಣಗಳಲ್ಲಿ ಚಿಲ್ಲರೆ ಅಂಗಡಿ ಮಳಿಗೆಗಳು, ಮಾಲ್‍ಗಳು, ಚಿತ್ರಮಂದಿರಗಳು ಸೇರಿದಂತೆ ನಾಗರಿಕರಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ, ಲಿಫ್ಟ್ ವ್ಯವಸ್ಥೆ ಅಳವಡಿಸಲಾಗುತ್ತದೆ.
ಈ ಏಳು ವಾಣಿಜ್ಯ ಸಂಕೀರ್ಣಗಳನ್ನು ಪುನರ್ ನಿರ್ಮಿಸಲು ಸುಮಾರು 700 ಕೋಟಿ ರೂ.ಗಳ ಅಗತ್ಯವಿದೆ. ಬಿಡಿಎ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಅಷ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಬಿಡಿಎ ಪ್ರಕಟಣೆ ತಿಳಿಸಿದೆ.

ನಿವೇಶನದ ಮಾಲೀಕತ್ವ ಬಿಡಿಎ ಅಧೀನದಲ್ಲೇ ಇರುತ್ತದೆ. 30 ವರ್ಷಗಳ ಒಪ್ಪಂದದ ಮೇರೆಗೆ ಪಿಪಿಪಿ ಮಾಡೆಲ್‍ನಲ್ಲಿ ಖಾಸಗಿಯವರಿಗೆ ಗುತ್ತಿಗೆಗೆ ನೀಡಲಾಗುತ್ತದೆ. ಖಾಸಗಿಯವರು ಬಂಡವಾಳ ಹೂಡಿಕೆ ಮಾಡಿ ತಾವು ನಿರ್ಮಿಸಿದ ಕಟ್ಟಡದ ಒಟ್ಟಾರೆ ಆದಾಯದಲ್ಲಿ ಬಿಡಿಎಗೆ ಪಾಲು ನೀಡಬೇಕಿದೆ.
ಈ ಯೋಜನೆಯಿಂದ ಬಿಡಿಎಗೆ ಈಗ ಸಿಗುತ್ತಿರುವ 5 ಕೋಟಿ ಬದಲಾಗಿ, ವರ್ಷಕ್ಕೆ 38.89 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ.
ಈಗಾಗಲೇ ಹಳೆಯ ವಾಣಿಜ್ಯ ಸಂಕೀರ್ಣಗಳಲ್ಲಿ ನೆಲೆಯೂರಿರುವ ಬಾಡಿಗೆದಾರರ ಹಿತ ಕಾಪಾಡುವುದಾಗಿ ಬಿಡಿಎ ಭರವಸೆ ನೀಡಿದೆ. ಹೊಸ ಕಟ್ಟಡಗಳ ನಿರ್ಮಾಣವಾದ ನಂತರ ಹಳೇ ಬಾಡಿಗೆದಾರರಿಗೆ ಅಲ್ಲಿ ಸ್ಥಳಾವಕಾಶ ಕಲ್ಪಿಸಲಾಗುವುದು, ಆವರೆಗೂ ಹಳೆಯ ಬಾಡಿಗೆದಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿಯೂ ಬಿಡಿಎ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ