ಬೆಂಗಳೂರು, ಜೂ. 2- ಸಾಲಮನ್ನಾ ಎಲ್ಲ ರೈತರಿಗೂ ಅನುಕೂಲ ಮಾಡಿಕೊಡುವ ಯೋಜನೆ ರೂಪಿಸಬೇಕೆಂದು ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.
ರಾಜ್ಯ ಸರ್ಕಾರ ಪ್ರಕಟಿಸಿರುವ ಸಾಲಮನ್ನಾ ಯೋಜನೆಯಲ್ಲಿ ಹಲವಾರು ತಿದ್ದುಪಡಿಗಳಾಗುವ ಅವಶ್ಯಕವಿದೆ. ಸಾಲಮನ್ನಾ ರೈತರಿಗೆ ಭಿಕ್ಷೆ ಅಲ್ಲ, ಸರ್ಕಾರಗಳು ಹಿಂದಿನಿಂದಲೂ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಅವೈಜ್ಞಾನಿಕವಾಗಿ ನಿಗದಿ ಮಾಡಿದ ಕಾರಣ ರೈತ ಅನುಭವಿಸಿರುವ ನಷ್ಟದ ಹಣವನ್ನು ಈ ಮೂಲಕ ತುಂಬಿಕೊಡುತ್ತಿವೆ ಎಂದು ಸ್ಪಷ್ಟಪಡಿಸಲಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಬೆಳೆ ಸಾಲ ಮನ್ನಾ ಅವಧಿಯನ್ನು 1.4.2009 ರಿಂದ 31.12.2017ರ ತನಕ ನಿಗದಿಗೊಳಿಸಿರುವುದು ಹೆಚ್ಚು ರೈತರು ಸಾಲಮನ್ನಾ ಯೋಜನೆಗೆ ಒಳಪಡುವುದಿಲ್ಲ. ಕಬ್ಬು ಬೆಳೆಗಾರ ರೈತರಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ವಿಳಂಬವಾಗಿ ಹಣ ಪಾವತಿ ಮಾಡಿದ್ದಾರೆ. ಇದರಿಂದ ಹೆಚ್ಚು ರೈತರಿಗೆ ಸಾಲ ನವೀಕರಣವಾಗಿದೆ. ಇವರು ಸಾಲ ಮನ್ನಾ ಯೋಜನೆಗೆ ಒಳಪಡುವುದಿಲ್ಲ. ಆದ್ದರಿಂದ 1.4.2005 ರಿಂದ ಆರ್ಥಿಕ ವರ್ಷ ಕೊನೆಯಾಗುವ 31.3.2018ರ ವರೆಗೆ ಈ ಯೋಜನೆಯನ್ನು ವಿಸ್ತರಿಸಬೇಕು ಹಾಗೂ 1.4.2014 ರಿಂದ ರೈತರು ಭೂಮಿ ದಾಖಲೆ ಇಲ್ಲದೆ ಚಿನ್ನ ಗಿರವಿ ಇಟ್ಟು ಪಹಣಿ ಪತ್ರ ನೀಡಿ ಪಡೆದಿರುವ ಸಾಲವನ್ನು ಮನ್ನಾ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ.
ಹಳ್ಳಿಯ ರೈತರು ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಯೂ ಸಹ ಸಾಲ ಪಡೆದಿದ್ದಾರೆ. ಇಂತಹ ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಬಯಲು ಸೀಮೆಯ ರೈತರಿಗೆ ಬೆಳೆ ಸಾಲ ಹೆಚ್ಚು ದೊರಕಿಲ್ಲ. ಆದ್ದರಿಂದ ಆ ಭಾಗದಲ್ಲಿ ಕೊಳವೆ ಬಾವಿ ಸಾಲ ಪಡೆದು ಈ ಹಣವನ್ನು ಬೆಳೆ ಬೆಳೆಯಲು ಕೃಷಿಗೆ ಬಳಸಿಕೊಂಡಿದ್ದಾರೆ. ಇಂತಹ ರೈತರ ಸಾಲವನ್ನು ಕೂಡ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.