ಜೂನ 6ರಂದು ಸಂಪುಟ ವಿಸ್ತರಣೆ: ದೆಹಲಿಗೆ ದೌಡಾಯಿಸಿದ ಕಾಂಗ್ರೆಸ್À ಉಸ್ತುವಾರಿ ಕೆ.ಸಿ.ವೇಣುಗೋಪಾಲ್

 

ಬೆಂಗಳೂರು, ಜೂ. 2- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ಪ್ರಮಾಣ ವಚನದ ದಿನಾಂಕ ನಿಗದಿಯಾಗಿದ್ದು, ಕಾಂಗ್ರೆಸ್ ಪಕ್ಷದ ವತಿಯಿಂದ ಸಚಿವರಾಗುವವರ ಪಟ್ಟಿಗೆ ಅಂಗೀಕಾರ ಪಡೆಯಲು ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ದೆಹಲಿಗೆ ದೌಡಾಯಿಸಿದ್ದಾರೆ.
ಬುಧವಾರ ಮಧ್ಯಾಹ್ನ ಸಂಪುಟ ವಿಸ್ತರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಯಾರ್ಯಾರಿಗೆ ಯಾವ ಖಾತೆ ನೀಡಬೇಕೆಂದು ಹೈಕಮಾಂಡ್‍ನಿಂದ ಒಪ್ಪಿಗೆ ಪಡೆಯಲು ವೇಣುಗೋಪಾಲ್ ಅವರು ದೆಹಲಿಗೆ ತೆರಳಿದ್ದು, ವರಿಷ್ಠರೊಂದಿಗೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಮೈತ್ರಿ ಸರ್ಕಾರದ ಒಪ್ಪಂದದಂತೆ ಕಾಂಗ್ರೆಸ್ ಪಕ್ಷಕ್ಕೆ ಗೃಹ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ಕೈಗಾರಿಕೆ ಮತ್ತು ಸಕ್ಕರೆ, ಆರೋಗ್ಯ, ಕಂದಾಯ, ಮುಜರಾಯಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ, ವಸತಿ, ವೈದ್ಯಕೀಯ ಶಿಕ್ಷಣ, ಸಮಾಜ ಕಲ್ಯಾಣ, ಪರಿಸರ ಮತ್ತು ಅರಣ್ಯ, ಕಾರ್ಮಿಕ, ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು, ಹಜ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ, ಕಾನೂನು ಮತ್ತು ಸಂಸದೀಯ ವ್ಯವಹಾರ, ಐಟಿ-ಬಿಟಿ, ಕ್ರೀಡೆ, ಯುವಜನ ಸೇವೆ, ಕನ್ನಡ ಮತ್ತು ಸಂಸ್ಕøತಿ, ಒಳನಾಡು ಸಾರಿಗೆ ಖಾತೆಗಳು ಲಭ್ಯವಾಗಿವೆ.
ಈ ಖಾತೆಗಳಿಗೆ ಯಾರನ್ನು ನೇಮಕ ಮಾಡಬೇಕು, ಯಾವ ಮಾನದಂಡದಡಿ ನೇಮಕ ಮಾಡಬೇಕು ಎಂಬ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹಾಗೂ ವರಿಷ್ಠರಾದ ಸೋನಿಯಾಗಾಂಧಿ ಅವರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್, ರಾಜಶೇಖರ್ ಪಾಟೀಲ್, ಶಿವಾನಂದ ಪಾಟೀಲ್, ಶಾಮನೂರು ಶಿವಶಂಕರಪ್ಪ, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಎಸ್.ಎಸ್.ಶಿವಳ್ಳಿ, ಶಿವಶಂಕರರೆಡ್ಡಿ, ಪುಟ್ಟರಂಗಶೆಟ್ಟಿ, ರೂಪಾ ಶಶಿಧರ್, ಲಕ್ಷ್ಮಿ ಹೆಬ್ಬಾಳ್ಕರ್, ಬಿ.ಸಿ.ಪಾಟೀಲ್, ಪ್ರಿಯಾಂಕ ಖರ್ಗೆ, ಅಜಯ್‍ಸಿಂಗ್ ಅವರಿಗೆ ಸಚಿವ ಸ್ಥಾನಗಳು ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಚಿವ ಖಾತೆಗಳನ್ನು ನೀಡುವ ಸಂದರ್ಭದಲ್ಲಿ ಜಾತಿವಾರು ಪ್ರಾತಿನಿಧ್ಯ, ಪ್ರಾದೇಶಿಕವಾರು ಪ್ರಾತಿನಿಧ್ಯ, ಸೇವಾ ಹಿರಿತನ ಮುಂತಾದವುಗಳ ಆಧಾರದ ಮೇಲೆ ಸಚಿವ ಸ್ಥಾನವನ್ನು ನೀಡುವ ಬಗ್ಗೆ ಈಗಾಗಲೇ ರಾಜ್ಯ ನಾಯಕರು ಚರ್ಚಿಸಿ ಒಂದು ಹಂತದ ತೀರ್ಮಾನ ಕೈಗೊಂಡಿದ್ದು, ಹೈಕಮಾಂಡ್ ಜತೆ ಮಾತುಕತೆ ನಡೆಸಿ ಪಟ್ಟಿಗೆ ಅಂಗೀಕಾರ ಪಡೆಯಲಿದ್ದಾರೆ.

ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಚರ್ಚಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬ ಬಗ್ಗೆಯೂ ತೀರ್ಮಾನಿಸಲಿದ್ದಾರೆ.
ಸಂಪುಟ ವಿಸ್ತರಣೆ ನಂತರ ಉಂಟಾಗಬಹುದಾದ ಭಿನ್ನಮತ ಶಮನಗೊಳಿಸಲು ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡುವ ವಿಚಾರದಲ್ಲೂ ಕೂಡ ಹೈಕಮಾಂಡ್ ಜತೆ ಚರ್ಚಿಸಲಿದ್ದಾರೆ. ಸೋಮವಾರ ಅಥವಾ ಮಂಗಳವಾರ ನಗರಕ್ಕೆ ವೇಣುಗೋಪಾಲ್ ಹಿಂದಿರುಗಲಿದ್ದು, ಬುಧವಾರ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ