ಬೆಂಗಳೂರು, ಜೂ.2- ನಗರದಲ್ಲಿ ಮಳೆ ಹಾನಿ ಅನಾಹುತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚರ್ಚಿಸಲು ಕೂಡಲೇ ವಿಶೇಷ ಕೌನ್ಸಿಲ್ ಸಭೆ ಕರೆಯುವಂತೆ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದ್ದಾರೆ.
ನಿನ್ನೆ ಮಳೆ ಬಂದ ವೇಳೆ ಕಾಂಪೌಂಡ್ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ರಸ್ತೆಗಳು ಕೆರೆಯಾಗಿವೆ. ಅನೇಕ ರಸ್ತೆಗಳು ಗುಂಡಿ ಬಿದ್ದಿವೆ. ಕಸ ವಿಲೇವಾರಿ ಸಮರ್ಪಕವಾಗಿಲ್ಲ. ಈ ಎಲ್ಲದರ ಬಗ್ಗೆ ಚರ್ಚಿಸಲು ವಿಶೇಷ ಕೌನ್ಸಿಲ್ ಸಭೆ ಕರೆಯಲು ಮೇಯರ್ ಸಂಪತ್‍ರಾಜ್ ಅವರಿಗೆ ಪತ್ರ ಬರೆದಿರುವುದಾಗಿ ರೆಡ್ಡಿ ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಪ್ರಕೃತಿ ವಿಕೋಪ ತಡೆಗಟ್ಟುವಂತಹ ಯಾವುದೇ ಕಾರ್ಯ ಕೈಗೆತ್ತಿಕೊಳ್ಳುತ್ತಿಲ್ಲ. ಹಾಗಾಗಿ ಸಾಕಷ್ಟು ಅನಾಹುತಗಳು ಆಗುತ್ತಿವೆ. ಪ್ರಕೃತಿ ವಿಕೋಪ ತಪ್ಪಿಸಲು ಬಿಬಿಎಂಪಿ ವಿಪೆÇ್ರೀ ಒಪ್ಪಂದ ಮಾಡಿಕೊಂಡಿದೆ. ಆ ಸಂಸ್ಥೆಯಿಂದ ನೆರವು ಪಡೆದರೆ ಎಲ್ಲೆಲ್ಲಿ ಅನಾಹುತವಾಗಿದೆ ಎಂಬುದರ ಬಗ್ಗೆ ಉಪಗ್ರಹದ ಮೂಲಕ ಚಿತ್ರ ಸಹಿತ ವರದಿ ನೀಡುತ್ತಾರೆ.
ಬಿಬಿಎಂಪಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್‍ನವರು ಮಳೆ ಅನಾಹುತ ತಡೆಗಟ್ಟಲು, ಕಸದ ಸಮಸ್ಯೆ ನಿವಾರಿಸಲು, ರಸ್ತೆ ಗುಂಡಿ ಮುಚ್ಚಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ ಎಂದು ಆರೋಪಿಸಿದರು.
ಮೊನ್ನೆ ನಡೆದ ಸಭೆಯಲ್ಲೂ ನಾನು ಈ ಬಗ್ಗೆ ಮನವಿ ಮಾಡಿದ್ದೆ. ಮೇಯರ್ ಹಾರಿಕೆಯ ಉತ್ತರ ಕೊಟ್ಟು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಇನ್ನೊಂದು ವಾರ ಗಡುವು ನೀಡುತ್ತೇವೆ. ಅಷ್ಟರಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾಗರಿಕರೊಂದಿಗೆ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದರು.