ಶಿರಸಿ :
ಈಗಾಗಲೇ ಸ್ಥಾಪಿತವಾಗಿರುವ ದಿ.ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಟ್ರಸ್ಟ್ ಅಡಿಯಲ್ಲಿ ಸುಶೀಲಾ ರಾಮಚಂದ್ರ ಹೆಗಡೆ ಹಾಗೂ ಖ್ಯಾತ ಕಲಾವಿದ ನರಸಿಂಹ ಹೆಗಡೆ ಚಿಟ್ಟಾಣಿ, ಇವರ ನೇತೃತ್ವದಲ್ಲಿ ಜನರು ಅಭಿಮಾನದಿಂದ ಕೊಟ್ಟ ಮಾನ ಸಮ್ಮಾನಗಳನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಿ ಸುರಕ್ಷಿತವಾಗಿ ಇಡುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ. ಚಿಟ್ಟಾಣಿಯವರ ಕನಸಿನಂತೆ ಕಲಾಭಿಮಾನಿಗಳು ಹಲವು ವರ್ಷಗಳಿಂದ ಅವರನ್ನು ಗುರುತಿಸಿ ನೀಡಿದ ಪ್ರಶಸ್ತಿ ಫಲಕ ಇತ್ಯಾದಿಗಳನ್ನು ಸುರಕ್ಷಿತವಾಗಿ ಇಡಲು ಮ್ಯೂಜಿಯಂ ಸ್ಥಾಪಿಸುವ ಕಾರ್ಯ ಭರದಿಂದ ನಡೆದಿದೆ. ಜೊತೆಗೆ ಅವರು ಬಾಳಿ ಬೆಳಗಿದ ಮನೆಯಂಗಳದಲ್ಲಿ ಚಿಟ್ಟಾಣಿ ಯಕ್ಷಗಾನ ಕಲಿಕಾ ಕೇಂದ್ರ ಒಂದನ್ನು ವರ್ಷಾಂತ್ಯದಲ್ಲಿ ಆರಂಭಗೊಳಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿ ಕಟ್ಟಡದ ಕಾರ್ಯ ಈಗಾಗಲೇ ಆರಂಭವಾಗಿದ್ದು, ಬರುವ ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಆಶಯ ನರಸಿಂಹ ಹೆಗಡೆ ಅವರದ್ದಾಗಿದೆ. ಈ ಸತ್ಕಾರ್ಯಕ್ಕೆ ಚಿಟ್ಟಾಣಿ ಅಭಿಮಾನಿಗಳು ಸಹೃದಯರು ನೀಡುವ ಸಹಕಾರ ಅಮೂಲ್ಯವಾಗಿದೆ. ಕಳೆದ ಆರು ದಶಕಗಳಿಂದ ಯಕ್ಷಲೋಕದಲ್ಲಿ ಮಿಂಚಿ ಅಪಾರ ಅಭಿಮಾನಿಗಳನ್ನು ಪಡೆದು ಖ್ಯಾತರಾದ ಕಲಾವಿದ ಚಿಟ್ಟಾಣಿ ಅವರ ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಅವರು ನೆಲೆಯಾದ ಸ್ವಗೃಹದ ಆವರಣದಲ್ಲಿ ಅವರ ಇಚ್ಛೆಯಂತೆ ಕೈಗೊಂಡ ಕಾರ್ಯ ಇದಾಗಿದೆ ಎಂದು ಅವರ ಧರ್ಮಪತ್ನಿ ಸುಶೀಲಾ ಹೆಗಡೆ ಅಂಬೋಣವಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಸಂಘ ಸಂಸ್ಥೆಗಳಿಂದ ಜೊತೆಗೆ ಕಲಾಭಿಮಾನಿಗಳಿಂದ ಸಾಮೂಹಿಕ ಸಹಾಯ ನಿರೀಕ್ಷಿಸುತ್ತಾ ಇರುವುದಾಗಿ ಕಲಾವಿದ ಚಿಟ್ಟಾಣಿ ನರಸಿಂಹ ಹೆಗಡೆ ಶಿರಸಿಯಲ್ಲಿ ತಿಳಿಸಿದ್ದಾರೆ.