ಶರಾವತಿ ಕಣೆವೆಗೆ ಹೊಸ ಬೃಹತ್ ಅರಣ್ಯ ನಾಶೀ ಯೋಜನೆಗಳು ಬೇಡ.

ಶಿರಸಿ: ಕರ್ನಾಟಕ ಪವರ್ ಕಾರ್ಪೋರೇಶನ್ ಶರಾವತಿ ಕಣಿವೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ಭೂಗತ ಜಲವಿದ್ಯುತ್ ಯೋಜನೆ ಪ್ರದೇಶಕ್ಕೆ ವೃಕ್ಷಲಕ್ಷ ಆಂದೋಲನ ಅಧ್ಯಯನಕಾರರ ತಂಡ ಇತ್ತೀಚೆಗೆ ಭೇಟಿ ನೀಡಿತ್ತು.

ಉ.ಕ ಜಿಲ್ಲೆ ಹಾಗೂ ಶಿವಮೊಗ್ಗಾ ವ್ಯಾಪ್ತಿಯಲ್ಲಿ ಬರುವ ನೂತನ ಜಲವಿದ್ಯುತ್ ಯೋಜನೆ ಜಾರಿ ಆಗುವ ಪ್ರದೇಶ ದಟ್ಟ ನಿತ್ಯಹರಿದ್ವರ್ಣದ ಪ್ರದೇಶ. ಇಲ್ಲಿ ಈಗಾಗಲೇ ಬೃಹತ್ ಜಲಾಶಯಗಳು ಇವೆ. ಶರಾವತಿ ಕಣಿವೆ ಹೊಸ ಯೋಜನೆಗಳನ್ನು ಭರಿಸುವ ಧಾರಣಾ ಸಾಮಥ್ರ್ಯ ಇಲ್ಲ. ಇನ್ನಷ್ಟು ರಸ್ತೆ ನಿರ್ಮಾಣ ಅರಣ್ಯ ನಾಶ, ಹೊಸ ಬೃಹತ್ ತಂತಿಮಾರ್ಗ ನಿರ್ಮಾಣ ಟನೆಲ್ಗಳ ನಿರ್ಮಾಣ, ಮುಂತಾದ ಕಾಮಗಾರಿಗಳು, ಸ್ಫೋಟಗಳು, ಇವೆಲ್ಲ ಸೇರಿ ಅಳಿದು ಉಳಿದಿರುವ ಹಸಿರು ಕಣಿವೆಯ ನಾಶಕ್ಕೆ ಕಾರಣವಾಗಲಿದೆ. ಅರಣ್ಯ ಇಲಾಖೆ ತಣ್ಣಗೆ ಕುಳಿತುಕೊಳ್ಳದೇ ಯೋಜನೆಯ ಬಗ್ಗೆ ವಿರೋಧ ಪ್ರಕಟಿಸಬೇಕು ಎಂದು ಪರಿಸರ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ವೃಕ್ಷಲಕ್ಷ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ|| ಟಿ. ವಿ. ರಾಮಚಂದ್ರ , ರಾಜ್ಯ ಔಷಧಿ ಸಸ್ಯ ಪ್ರಾಧಿಕಾರದ ಸದಸ್ಯ ಡಾ|| ಕೇಶವ ಹೆಚ್ ಕೊರ್ಸೆ ರಾಜ್ಯಜೀವ ವೈವಿಧ್ಯ ಮಂಡಳಿಯ ಸದಸ್ಯರಾಗಿದ್ದ ಡಾ|| ಎಂ. ಡಿ. ಸುಭಾಸ್ಚಂದ್ರನ್ ವೃಕ್ಷಲಕ್ಷ ಸಂಚಾಲಕ, ಗಣಪತಿ ಕೆ. ಪ್ರಾಧ್ಯಾಪಕ ಗಣೇಶ ಹೆಗಡೆ ಜೀವವೈವಿಧ್ಯ ಅಧ್ಯಯನಕಾರ ರಮೇಶ ಕಾನಗೋಡ, ಶರಾವತಿ ಸಂಸ್ಥೆಯ ಸುಬ್ಬರಾವ್, ಅರಣ್ಯ ಅಧ್ಯಯನಕಾರ ವಿನಯ್ ಮುಂತಾದವರು ಶರಾವತಿ ಕಣಿವೆ ಭೇಟಿ-ಸಮೀಕ್ಷೆಯಲ್ಲಿ ಪಾಲ್ಗೊಂಡರು. ಗೇರುಸೊಪ್ಪಾ, ಮಾವಿನಗುಂಡಿ, ಜೋಗ, ಹೆನ್ನಿ, ಪಡನಬೈಲು, ತಲಕಳಲೆ, ಬಿದರೂರು, ಅರಣ್ಯ ಪ್ರದೇಶಗಳಿಗೆ ತಜ್ಞರು ಭೇಟಿ ನೀಡಿದರು.

ವೃಕ್ಷಲಕ್ಷ ತಂಡ ಗ್ರಾಮ ಜನರನ್ನು, ವನವಾಸಿಗಳನ್ನು ಸ್ಥಳೀಯ ಅರಣ್ಯ ಅಧಿಕಾರಿಗಳನ್ನು ಕೆಪಿಸಿ ಸಮೀಕ್ಷಾ ವಿಭಾಗದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿ, ಮಾಹಿತಿ ಸಂಗ್ರಹಿಸಿತು. ತಲಕಳಲೆ ಹಿನ್ನೀರು ಪ್ರದೇಶದಿಂದ ಗೇರುಸೊಪ್ಪಾವರೆಗೆ ನಿರ್ಮಿಸಲು ಉದ್ದೇಶಿಸಿರುವ ಟನೆಲ್ ಗಳು, ರಸ್ತೆನಿರ್ಮಾಣ ಎಲ್ಲೆಲ್ಲಿ, ಜಲಾನಯದಿಂದ ನೀರನ್ನು ಎತ್ತಲು ಬೇಕಾದ ವಿದ್ಯುತ್, ಪವರ್ ಹೌಸ್ ಭೂಮಿ ಅಡಿ ನಿರ್ಮಾಣ ಹೇಗೆ? ನೀರಿನ/ಲಭ್ಯತೆ ಹೇಗೆ, ವಿದ್ಯುತ್ ಸಾಗಾಟಕ್ಕೆ ತಂತಿ ಮಾರ್ಗ ನಿರ್ಮಾಣ ಎಲ್ಲಿ, ವರ್ಷದ ಎಷ್ಟು ದಿನ, ದಿನದ ಯಾವ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಇತ್ಯಾದಿ ಹಲವು ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಪಡೆದದ್ದು ವಿಶೇಷ.

ಶರಾವತಿ ಟೇಲ್ರೇಸ್ ಯೋಜನೆ ನಿರ್ಮಾಣ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಶರಾವತಿ ಕಣಿವೆಯ ಸಮಗ್ರ ಪರಿಸರ ಅಧ್ಯಯನ ನಡೆಸಿತ್ತು. ಈ ಅಧ್ಯಯನ ವರದಿ ಶಿಫಾರಸ್ಸುಗಳನ್ನು ಕೆಪಿಸಿ ಪರಿಗಣಿಸಬೇಕು ಎಂದು ವೃಕ್ಷಲಕ್ಷ ತಂಡ ಅಭಿಪ್ರಾಯ ಪಟ್ಟಿದೆ. ಶರಾವತಿ ಹಿನ್ನೀರಲ್ಲಿ ಭೂಮಿಕಳೆದುಕೊಂಡ ಸಂತ್ರಸ್ತರನ್ನು ತಂಡ ಭೇಟಿ ಮಾಡಿತು. ಇನ್ನೂ ಕೆಲವರಿಗೆ ಪರಿಹಾರ ದೊರೆತಿಲ್ಲ ಎಂಬ ಸಂಗತಿ ಬೆಳಕಿಗೆ ಬಂತು. ಶರಾವತಿ ಕಣಿವೆಯ ವನವಾಸಿ ಜನ ಹಲವು ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬ ಸಂಗತಿ ಎದ್ದು ಕಂಡಿತು. ಸದ್ಯದಲ್ಲೇ ತಜ್ಞ ತಂಡ ತನ್ನ ವಿವರ ವರದಿ ಪ್ರಕಟಿಸಲಿದೆ ಎಂದು ವೃಕ್ಷಲಕ್ಷ ಸಂಚಾಲಕ ವೆಂಕಟೇಶ್, ಗಣಪತಿ ಕೆ. ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ