ಶಿರಸಿ: ಜಾಗತಿಕ ಪರಿಸರ ದಿನದ ಮುನ್ನಾದಿನ ಜೂನ್ 4 ರಂದು ಬೆಳಿಗ್ಗೆ 11 ಘಂಟೆಗೆ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸ್ವರ್ಣವಲ್ಲೀ ಮಹಾಸಂಸ್ಥಾನ ಇವರು ಶಿರಸಿ ತಾ|| ಅಗಸಾಲ ಬೊಮ್ಮನಳ್ಳಿಯಲ್ಲಿ ಸಸಿನೆಟ್ಟು ವೃಕ್ಷಪೂಜೆ ಮಾಡಲಿದ್ದಾರೆ. ಗ್ರಾಮ ಅರಣ್ಯ ಸಮೀತಿ ಆಶ್ರಯದಲ್ಲಿ ಅರಣ್ಯ ಇಲಾಖೆ, ವೃಕ್ಷಲಕ್ಷ, ಯುವಕ ಸಂಘ ಮಾತೃಮಂಡಳಿ ಇನ್ನಿತರ ಸ್ಥಳೀಯ ಸಂಘಟನೆಗಳ ಸಹಕಾರದಲ್ಲಿ ಹಸಿರು ಸಮಾರಂಭ ನಡೆಯಲಿದೆ.
ಬೊಮ್ಮನಳ್ಳಿ-ದೇವದಕೇರಿ ರಸ್ತೆಯ ಪಕ್ಕದ 25 ಎಕರೆ ಪ್ರದೇಶದಲ್ಲಿ ಫಲವೃಕ್ಷ ವನ ನಿರ್ಮಾಣವಾಗಲಿದೆ. ಹಲಸು, ಮಾವು, ನೆಲ್ಲಿ, ಮುರುಗಲು, ತಾರೆ, ನೇರಲೆ ಸೇರಿದಂತೆ 20 ಕ್ಕೂ ಹೆಚ್ಚು ಜಾತಿಯ ಸಾವಿರಾರು ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಅರಣ್ಯ ಸಮೀತಿಯ ಸಂಕಲ್ಪ ಸಾಕಾರಗೊಳ್ಳಲಿದೆ,
ಜೂನ್ 4ರಂದು ಅರಣ್ಯದಲ್ಲಿ ಕಿರುಕೆರೆ ನಿರ್ಮಾಣ, ನೂರಾರು ಇಂಗುಗುಂಡಿ ನಿರ್ಮಾಣ ಸೇರಿದಂತೆ ವಿಶೇಷ ಜಲಸಂವರ್ಧನ ಕಾರ್ಯಕ್ರಮ ಆರಂಭವಾಗಲಿದೆ. ವೃಕ್ಷಾರೋಪಣ ಅಭಿಯಾನದ ಶುಭ ಸಮಾರಂಭದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ವೃಕ್ಷಲಕ್ಷ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಶಾರದಾಂಬಾ ಶಿಕ್ಷಣ ಸಂಸ್ಥೆ ಹಾಗೂ ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ. ಎನ್. ಹೆಗಡೆ ಬೊಮ್ಮನಳ್ಳಿ, ಅರಣ್ಯ ಸಂರಕ್ಷಣಾ ಅಧಿಕಾರಿ ಅಶೋಕ ಬಾಸರಕೋಡ, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ, ಸುದರ್ಶನ ಎ. ಸಿ. ಎಫ್. , ರೇಂಜರ್, ಮುಂತಾದವರು ಆಗಮಿಸಲಿದ್ದಾರೆ.
ಅರಣ್ಯ ಸಮೀತಿ ಅಧ್ಯಕ್ಷ ವಿಶ್ವನಾಥ ಹೆಗಡೆ ಬುಗಡಿಮನೆ ಅವರು ಪರಿಸರಾಸಕ್ತರು ಗ್ರಾಮೀಣ ಬಾಂಧವರು ಬಂದು ವೃಕ್ಷಾರೋಪಣದಲ್ಲಿ ಬಾಗವಹಿಸಲು ಆಹ್ವಾನ ನೀಡಿದ್ದಾರೆ.
ಇನ್ನಷ್ಟು ಮಾಹಿತಿ: ಗ್ರಾಮ ಅರಣ್ಯ ಸಮೀತಿ ಅಗಸಾಲ ಬೊಮ್ಮನಳ್ಳಿ ಆಶ್ರಯದಲ್ಲಿ ವೃಕ್ಷಲಕ್ಷ ಆಂದೋಲನದ ಮಾರ್ಗದರ್ಶನದಲ್ಲಿ ಕಳೆದ 10 ವರ್ಷಗಳಿಂದ ಹಲವು ವಿಧಾಯಕ ಕಾರ್ಯ ಚಟುಚಟಿಕೆಗಳನ್ನು ನಡೆಸಲಾಗುತ್ತಿದೆ. ಪ್ರತಿವರ್ಷ ವೃಕ್ಷವಿತರಣೆ, ಬೆಟ್ಟ ಅಭಿವೃದ್ಧಿ, ನದೀ ಗುಂಟ ಪಾದಯಾತ್ರೆ, ಕೈಲಾಸಗುಡ್ಡ ಸಂರಕ್ಷಣೆ, ಕಾಡಿನ ಜೇನು ಸಂರಕ್ಷಣೆ, ಕಸಿ ತರಬೇತಿ, ಸೋಲಾರ್ ಸೌಲಭ್ಯ, ಹಸಿರು ಆರೋಗ್ಯ ಶಿಬಿರಗಳು ಹೀಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕಳೆದ 2 ವರ್ಷಗಳಲ್ಲಿ 1500 ಇಂಗುಗುಂಡಿಗಳನ್ನು ಗ್ರಾಮಗಳ ಬೆಟ್ಟ ಭೂಮಿಯಲ್ಲಿ ನಿರ್ಮಿಸಲಾಗಿದೆ. 4 ಕಿರುಕೆರೆಗಳ ನಿರ್ಮಾಣ, 2 ಕೆರೆಗಳ, ಪುನಶ್ಚೇತನ ನಡೆಸಲಾಗಿದೆ ಎಂಬ ವಿಶೇಷ ಸಂಗತಿಗಳನ್ನು ಇಲ್ಲಿ ನೆನಪಿಸಲಾಗಿದೆ. ರಾಜ್ಯದ ಇಬ್ಬರು ಅರಣ್ಯ ಸಚಿವರು, ಅರಣ್ಯ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಅಧಿಕಾರಿ, ರಾಜ್ಯ ಸಭಾ ಸದಸ್ಯ ಜೈರಾಂ ರಮೇಶ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ಬೈಯ್ಯಾಜಿ ಜೋಷಿ ಮುಂತಾದ ಗಣ್ಯರು ಇಲ್ಲಿನ ಅರಣ್ಯ ಸಮೀತಿಯ ಗ್ರಾಮ ವಿಕಾಸ, ಪರಿಸರ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ ಮಾಡಿದ್ದಾರೆ ಎಂಬುದು ಉಲ್ಲೇಖನೀಯ