ಬೆಂಗಳೂರು, ಜೂ.1- ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮೇಲೆ ಪದೇ ಪದೇ ಐಟಿ, ಸಿಬಿಐನವರು ದಾಳಿ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಂದು ಖಂಡಿಸಿರುವ ರಾಜ್ಯ ಒಕ್ಕಲಿಗರ ಸಂಘ, ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಇಂದು ಒಕ್ಕಲಿಗರ ಸಂಘದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಕೇಂದ್ರ ಸರ್ಕಾರ, ಡಿಕೆಶಿ ಸಹೋದರರ ಮೇಲೆ ನಡೆಸುತ್ತಿರುವ ನಿರಂತರ ದಾಳಿ ನಮ್ಮ ಜನಾಂಗಕ್ಕೆ ಮಾಡುತ್ತಿರುವ ಅವಮಾನವಾಗಿದೆ. ರಾಜ್ಯದಲ್ಲಿ ಬೇರೆ ಯಾರೂ ಇಲ್ಲವೆ? ಇವರು ಮಾತ್ರ ಕೇಂದ್ರ ಸರ್ಕಾರಕ್ಕೆ ಕಾಣುವುದೆ? ಇದು ದುರುದ್ದೇಶಪೂರ್ವಕವಾಗಿ ನಡೆಸುತ್ತಿರುವ ದಾಳಿಯಾಗಿದೆ. ಡಿಕೆಶಿ ಅವರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಮತ್ತು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಅವರನ್ನು ನಾವು ಬೆಂಬಲಿಸಿದ್ದೇವೆ, ಬೆಂಬಲಿಸುತ್ತೇವೆ. ಅವರು ಈ ಬಗ್ಗೆ ಪ್ರಶ್ನೆ ಮಾಡಬೇಕು. ಡಿ.ಕೆ.ಶಿವಕುಮಾರ್ ಅವರಿಗೆ ಡಿಸಿಎಂ ಹುದ್ದೆ ಮತ್ತು ಸಚಿವ ಸ್ಥಾನ ತಪ್ಪಿಸಲು ಅವರ ರಾಜಕೀಯ ಏಳಿಗೆಯನ್ನು ಸಹಿಸದೆ ಈ ರೀತಿ ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ ಆರೋಪಿಸಿದರು.
ಸಂಘದ ನಿರ್ದೇಶಕ ಪೆÇ್ರ.ಮಲ್ಲಯ್ಯ ಮಾತನಾಡಿ, ಸದಾನಂದಗೌಡರು ಕೇಂದ್ರ ಸಚಿವರಾಗಿದ್ದಾರೆ. ಅವರನ್ನು ಈ ವಿಷಯದಲ್ಲಿ ಎಳೆದು ತರುವುದಿಲ್ಲ. ಆದರೆ, ಬಿಜೆಪಿ ರಾಜಕೀಯವಾಗಿ ಈ ರೀತಿ ಮಾಡುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಖಜಾಂಚಿ ಬಿ.ಸಿ.ಕೆ.ಕಾಳೇಗೌಡ, ನಿರ್ದೇಶಕರಾದ ಎಂ.ರಮೇಶ್, ಕೃಷ್ಣಮೂರ್ತಿ, ನಂಜೇಗೌಡ, ಎಂ.ಎ.ಆನಂದ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.