ಗದಗ:ಜೂ-1: ಹಣ್ಣುಗಳ ರಾಜ ಮಾವು ಅಂದ್ರೆ ಇದೀಗ ಜನಸಾಮಾನ್ಯರಿಗೆ ತಲೆನೋವಾಗಿದೆ. ಮಾವಿನ ಸೀಜನ್ ಗಾಗಿ ಕಾಯುತ್ತಿದ್ದ ಜನರಿಗೆ ಈ ಬಾರಿ ಮಾವಿನ ರುಚಿ ಬೇಡವಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡ ಮಾವಿನಿಂದ ವ್ಯಾಪಾರಸ್ಥರು, ರೈತರು ಪರದಾಡುವಂತಾಗಿದೆ. ಇದಕ್ಕೆ ಕಾರಣವೇನು ಅಂತಿರಾ ಹಾಗಾದ್ರೆ ಈ ಸ್ಟೋರಿ ನೋಡಿ.
ಮಾವು ಅಂದ್ರೆ ಸಾಕು ಯಾರಿಗೆ ತಾನೇ ಬಾಯಲ್ಲಿ ನೀರು ಜಿನುಗಲ್ಲ ಹೇಳಿ. ತನ್ನ ರುಚಿಯಿಂದಾಗಿ ಹಣ್ಣುಗಳ ರಾಜ ಎಂದು ಕರೆಸಿಕೊಳ್ಳುವ ಮಾವಿನ ಹಣ್ಣಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಕೆಳೋರಿಲ್ಲದಂತಾಗಿದೆ. ಹೌದು ಇದಕ್ಕೆ ಮುಖ್ಯ ಕಾರಣ ನಿಫಾ ವೈರಸ್..! ನಿಫಾ ವೈರಸ್ ವದಂತಿ ಹಿನ್ನೆಲೆ ಇಂದು ಜನಸಾಮಾನ್ಯರು ಮಾವಿನ ಹಣ್ಣಿನ ಸಮೀಪವೂ ಸುಳಿಯುತ್ತಿಲ್ಲ. ಹಣ್ಣು ತಿನ್ನಲು ಕಾತುರದಿಂದ ಕಾಯುತ್ತಿದ್ದ ಜನ ಈಗ ಮಾವಿನ ಹಣ್ಣು ನೋಡಿದರೆ ಮಾರುದ್ದ ಓಡುವಂತಾಗಿದೆ. ಇಂಥದ್ದೊಂದು ಸ್ಥಿತಿ ಗದಗ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ನಿಫಾ ವೈರಸ್ ನಿಂದ ಜನ ಭಯ ಬೀತರಾಗಿದ್ದು, ಮಾವಿನ ಬೆಲೆ ಕಡಿಮೆ ಯಾಗಲು ಪ್ರಮುಖ ಕಾರಣ. ಬಾವಲಿಗಳು ತಿಂದು ಬಿಟ್ಟ ಹಣ್ಣಿನಿಂದ ಈ ವೈರಸ್ ಬರುತ್ತದೆ ಅನ್ನೋ ಕಾರಣಕ್ಕೆ ಜನ ಮಾವಿನ ಸಹವಾಸದಿಂದ ದೂರವಾಗುತ್ತಿದ್ದಾರೆ. ಜನರಲ್ಲಿನ ಈ ಭಯ ಮಾವಿನ ಹಣ್ಣಿನ ವ್ಯಾಪಾರಸ್ಥರನ್ನು ಕಂಗಾಲಾಗಿಸಿದೆ. ಇದ್ರಿಂದಾಗಿ ಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಹಣ್ಣು ಮಾರಿ ಬದುಕು ಕಟ್ಟಿಕೊಂಡವರ ಬದುಕು ಬೀದಿಗೆ ಬರುವಂತಾಗಿದೆ. ಆದ್ರೆ ಜನ ತಮ್ಮ ಆರೋಗ್ಯದ ಮೇಲಿನ ಭಯದಿಂದ ಮಾವಿನತ್ತ ಮುಖ ಮಾಡ್ತಿಲ್ಲ.
ಗದಗ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಲವು ರೈತರಲ್ಲಿ ಮಂದಹಾಸ ಮೂಡಿಸಿದೆ. ಆದ್ರೆ ಮಾವು ಬೆಳೆಗಾರರಿಗೆ ಮಾತ್ರ ನೋವು ತಂದಿದೆ. ನೂರಾರು ಎಕರೆ ಪ್ರದೇಶದಲ್ಲಿ ಮಾವು ಬೆಳೆದ ರೈತರ ಮೇಲೂ ನಿಫಾ ವೈರಸ ವದಂತಿಯ ಪರಿಣಾಮ ಬೀರಿದೆ. ರೂ. ೧೦೦ ರಿಂದ ರೂ. ೧೨೦ ಕೆಜಿ ಇದ್ದ ಮಾವಿನ ಹಣ್ಣಿನ ಬೆಲೆ ರೂ. ೪೦ ರಿಂದ ರೂ.೫೦ ಕ್ಕೆ ಇಳಿಕೆಯಾಗಿದೆ. ಹೀಗಾಗಿ ಬೆಲೆ ಕುಸಿತ ರೈತರನ್ನು ಆರ್ಥಿಕ ಸಂಕಷ್ಟಕ್ಕೀಡು ಮಾಡಿದೆ.
ಸಧ್ಯ ಮಾವಿನ ಸೀಜನ್ ಇರೋದ್ರಿಂದ ಇದೀಗ ಮಾವಿನ ಹಣ್ಣಿನ ಮೇಲೆ ನಿಫಾ ಪರಿಣಾಮ ಹೆಚ್ಚು ಬೀರಿದೆ. ಇದರ ಜೊತೆಗೆ ಇನ್ನಿತರ ಹಣ್ಣುಗಳಿಗೂ ಬೀರಿದ್ದು, ಹಣ್ಣು ಬೆಳೆದ ರೈತರ ಬದುಕಿಗೆ ಹುಣ್ಣಾಗುವ ಲಕ್ಷಣ ಗೋಚರಿಸುತ್ತಿದೆ. ನಿಫಾ ವೈರಸ್ ವದಂತಿ ಮಾತ್ರ ಬೆಳೆಗಾರರಿಗೆ ಹಾಗೂ ವ್ಯಾಪಾರಸ್ಥರನ್ನು ಕಂಗಾಲಾಗಿಸಿದೆ.
ಒಟ್ಟಿನಲ್ಲಿ ನಿಫಾ ವೈರಸ್ ಪರಿಣಾಮ ಬರೀ ಜನರ ಮೇಲೆ ಪ್ರಭಾವ ಬಿರಿಲ್ಲ. ಬದಲಾಗಿ ಹಣ್ಣು ಮಾರಾಟಗಾರರು ಹಾಗೂ ರೈತರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಈ ಬಗ್ಗೆ ಸಂಬಂಧಿಸಿದ ಇಲಾಖೆ ನಿಫಾ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕಿದೆ.