ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪೂರ್ಣಾವಧಿ ಅಧಿಕಾರ ಮಾಡಲಿ: ಪೇಜಾವರ ಶ್ರೀ

ಉಡುಪಿ:ಜೂ-೧: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅನುಭವಿ ರಾಜಕಾರಣಿ. ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ ಎಂದು ಪೇಜಾವರ ಶ್ರೀಗಳು ಹಾರೈಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ವಿಕೃತಿ. ರಾಜಕಾರಣಿಗಳು ರೆಸಾರ್ಟ್, ಆಪರೇಷನ್‌ನಲ್ಲಿ ತಲ್ಲೀನರಾಗಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳು ನೈತಿಕತೆ ಹೊಂದಿಲ್ಲ. ಗೊಂದಲ ನಿರ್ಮಾಣವಾದ್ರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಬೇಡ. ಸರ್ವ ಪಕ್ಷ ಸರ್ಕಾರ ಜಾರಿಗೆ ಬರಬೇಕು. ಅಂತಹ ಪ್ರಯೋಗ ರಾಜ್ಯದಲ್ಲಿ ನಡೆಯಬೇಕು. ಆದರ್ಶ ಮಂತ್ರಿ ಮಂಡಲ ರಚನೆಯಾಗಲಿ ಎಂದರು.

ವಿರೋಧ ಪಕ್ಷ ಮುಕ್ತ ಸರ್ಕಾರ ಸರಿಯಲ್ಲ. ವಿರೋಧ ಪಕ್ಷ ಇರಬೇಕು ಎನ್ನುವುದು ನನ್ನ ವಾದ. ಮೋದಿ ಸರ್ಕಾರದಿಂದ ಸಾಕಷ್ಟು ಕೆಲಸ ಆಗಿದೆ. ಕೇಂದ್ರ ಸರ್ಕಾರದ ಬಗ್ಗೆ ನಿರೀಕ್ಷೆ ಬಹಳ ಇತ್ತು. ನಿರೀಕ್ಷೆಯಷ್ಟು ಸಾಧನೆಗಳು ಆಗಲಿಲ್ಲ ಎಂಬ ಬೇಸರವಿದೆ. ರಾಮ ಮಂದಿರಕ್ಕಿಂತ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ಗಂಗಾ ಶುದ್ಧೀಕರಣ ಸಂಪೂರ್ಣವಾಗಿ ಆಗಿಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, ವಿದೇಶದಿಂದ ಕಪ್ಪು ಹಣವನ್ನು ಪ್ರಧಾನಿ ಮೋದಿ ತರಿಸಿಲ್ಲ. ದೇಶದ ಜನಕ್ಕೆ , ನಮಗೆ ನಿರೀಕ್ಷೆಯಿತ್ತು. ವಿರೋಧ ಪಕ್ಷಗಳಲ್ಲಿ ಐಕ್ಯತೆ ಮೂಡಿದೆ. ಈ ಹಿಂದೆ ಇಂದಿರಾ ಗಾಂಧಿಗೂ ಹೀಗೇ ಆಗಿತ್ತು. ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಆಗಬಹುದು ಎಂದರು. ಚುನಾವಣೆಗೂ ಮೊದಲು ಮೋದಿ ಕೆಲಸ ಮಾಡಿ ತೋರಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಇಫ್ತಾರ್ ಕೂಟ:
ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕೆಂಬ ಭಾವನೆ ಇದೆ. ಮುಸಲ್ಮಾನ ನಾಯಕರು, ಪ್ರಮುಖರು ಒಪ್ಪಿದರೆ ಸತ್ಕಾರ ಕೂಟ ಮಾಡುತ್ತೇನೆ. ಈ ಬಾರಿ ಮುಸ್ಲಿಮರು ಇಫ್ತಾರ್ ಕೂಟಕ್ಕೆ ಬಹಳ ಉತ್ಸಾಹ ತೋರಿಸುತ್ತಿಲ್ಲ. ಕಳೆದ ಬಾರಿಯ ಇಫ್ತಾರ್ ಕೂಟ ಬಹಳ ಚರ್ಚೆಯಾಗಿತ್ತು. ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಆದ್ದರಿಂದ ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಆಲೋಚನೆಯಿದೆ ಎಂದರು.

ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರು ಸಮಾನವಾಗಿ ಕಾಣಬೇಕು. ಸಂವಿಧಾನ ಬದಲಿಸಿ ಅಂತ ನಾನು ಯಾವತ್ತೂ ಹೇಳಿಲ್ಲ. ದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಶಿಕ್ಷಣ, ಆಹಾರ, ಸರ್ಕಾರದ ಯೋಜನೆ ಎಲ್ಲಾ ಧರ್ಮದ ಬಡವರಿಗೆ ಸಿಗಬೇಕು. ನಾನು ಅಂಬೇಡ್ಕರ್ ವಿರೋಧಿಯಲ್ಲ ಎಲ್ಲಾ ಧರ್ಮ, ಜಾತಿಯವರೊಂದಿಗೆ ನಾನು ಚೆನ್ನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ